ಗಾಂಧಿ ರಾಜ್ಯ ಮಾಡುತ್ತೇವೆಂದು ಗೂಂಡಾ ರಾಜ್ಯ ಮಾಡುತ್ತಿದ್ದಾರೆ: ಸಿ.ಟಿ ರವಿ.

28

ಬೆಂಗಳೂರು: ಮೊಟ್ಟೆ ದಾಳಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆರ್‍ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮನೆಗೆ ಎಂಎಲ್‍ಸಿ ಸಿ.ಟಿ ರವಿ ಅವರು ಶುಕ್ರವಾರ ಭೇಟಿ ನೀಡಿ, ಮುನಿರತ್ನ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಭೇಟಿ ನೀಡಿದ ನಂತರ ಮಾಧ್ಯಮಗಾರರೊಂದಿಗೆ ಮಾತನಾಡಿದ ಎಂಎಲ್‍ಸಿ ಸಿ.ಟಿ ರವಿ ಅವರು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟಕರ. ಯಾರೇ ತಪ್ಪು ಮಾಡಿದರೂ ಅದನ್ನು ಕಾನೂನಿನ ಮೂಲಕ ಎದುರಿಸಬೇಕು. ಅದರ ಬದಲಾಗಿ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಾದ ಕ್ರಮವಲ್ಲ. ಗಾಂಧಿಗಿರಿ ನೆನಪಿಸಿಕೊಳ್ಳುವ ಸಮಯದಲ್ಲಿ ಗೂಂಡಾಗಿರಿ ಮಾಡಲು ಶುರುಮಾಡಿದ್ದಾರೆ. ರಾಜ್ಯವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ದುರುಪಯೋಗ ಆಗಿರೋದು ಅಂಗೈ ನಲ್ಲಿ ಇರೋ ಹುಣ್ಣಿನಂತೆ. ನನ್ನನ್ನ ಬಂಧಿಸಿದ್ದು ಯಾವ ಹಿನ್ನೆಲೆಯಲ್ಲಿ, ಅದರ ಪರಮಾಧಿಕಾರ ಇರುವುದು ನಮ್ಮ ಸಭಾಪತಿ ಅವರಿಗೆ. ಸಭಾಪತಿಗಳು ರೂಲಿಂಗ್ ಕೊಟ್ಟ ನಂತರವೂ ಕಾನೂನು ಉಲ್ಲಂಘನೆ ಮಾಡಲಾಗಿದೆ. ನನ್ನನ್ನು ಬಂಧನ ಮಾಡಿ ಅಮಾನವೀಯ ವರ್ತನೆ ಮಾಡಿದ್ದಾರೆ. ಆದರೆ. ಬೆನ್ನನ್ನು ತೋರಿಸಿ ಓಡಿ ಹೋಗುವ ಅಭ್ಯಾಸ ನನಗಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಲಾಗಿದ್ದು, ಇಂದಿರಾ ಗಾಂಧಿ ಅವರ ಪರಿಸ್ಥಿತಿ ಏನಾಯಿತು ಎಂದು ಪ್ರಶ್ನಿಸಲಾಯಿತು. ಬಳಿಕ ಶಾಸಕ ಮುನಿರತ್ನ ಮಾತನಾಡಿ, ಘಟನೆ ನಡೆದಾಗ ಸಿ.ಟಿ ರವಿ ನನಗೆ ಕರೆ ಮಾಡಿ ವಿಚಾರಿಸಿದರು. ನಿಮ್ಮ ಜೊತೆ ನಾವಿದ್ದೇವೆ, ನಡೆಯುತ್ತಿರುವ ಎಲ್ಲಾ ವಿಷಯವನ್ನ ದೆಹಲಿಗೆ ತಲುಪಿಸಿದ್ದೇನೆ ಎಂದಿದ್ದರು. ಒಬ್ಬ ಶಾಸಕನ ಹಕ್ಕನ್ನ ಕಸಿಯಲಾಗುತ್ತಿದೆ. ಕ್ಷೇತ್ರಕ್ಕೆ ನಾನು ಹೋಗಬಾರದೆಂದು ಹೀಗೆ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅವರಿಗೆ ಕ್ಷೇತ್ರಕ್ಕೆ ಹೋಗಲು ಅವಕಾಶ ಇದೆ, ಆದರೆ ನಾನು ಮಾತ್ರ ಕ್ಷೇತ್ರಕ್ಕೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು ಎಂದು ಮಾಹಿತಿ ತಿಳಿದುಬಂದಿದೆ.