ಬೆಂಗಳೂರು: ಹೊಸ ವರ್ಷದ ಆಚರಣೆಯ ದಿನ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ 70 ಮಂದಿಯನ್ನು ಬಂಧಿಸಲಾಗಿದೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸೇರಿದಂತೆ, ವಿವಿಧ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ಕಮಿಷನರ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಟೆಲ್. ಪಬ್, ಮತ್ತು ರೆಸ್ಟೋರೆಂಟ್‍ಗಳನ್ನು ಹೊಸ ವರ್ಷಾಚರಣೆ ದಿನ ಅಂದರೆ ಡಿ.31 ರಂದು ರಾತ್ರಿ 1 ಗಂಟೆಯ ಒಳಗೆ ಬಂದ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ನಶೆಯಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದರು. ಬೆಂಗಳೂರು ಹೊರ ವಲಯದಲ್ಲಿ ನಡೆಯುವ ರೇವ್ ಪಾರ್ಟಿ ಸೇರಿದಂತೆ ಎಲ್ಲ ಪಾರ್ಟಿಗಳ ಮೇಲೂ ಕಣ್ಣಿಟ್ಟು ಕೆಲಸ ನಿರ್ವಹಿಸಲಾಗಿದೆ. ನಗರದಲ್ಲಿ ಬ್ರಿಗೆಡ್ ರೋಡ್, ಎಂ.ಜಿ ರೋಡ್, ಇಂದಿರಾನಗರ, ಕೋರಮಂಗಲ ಸೇರಿ ಎಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಡ್ರೋಣ್, ಸಿಸಿಟಿವಿ, ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ, ಶ್ವಾನದಳದಿಂದ ತಪಾಸಣೆ ಮಾಡಲಾಗುತ್ತೆ. ಹಾಗೂ ಹೆಚ್ಚಿನ ಮಟ್ಟದ ಬ್ಯಾರಿಕೇಡ್ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ, ಮತ್ತು ಅಗ್ನಿಶಾಮಕ ದಳ ವಾಹನದ ವ್ಯವಸ್ಠೆ ಕೂಡ ಇರುತ್ತದೆ ಎಂದು ಮಾಹಿತಿ ತಿಳಿಸಲಾಗಿದೆ.










