ಡಾ. ಮನಮೋಹನ ಸಿಂಗ್‍ಗೆ ಅಂತಿಮ ವಿದಾಯ, ಸಕಲ ಸರ್ಕಾರಿ ಗೌರವ.

30

ನವದೆಹಲಿ: ಗುರುವಾರ ಅನಾರೋಗ್ಯದಿಂದ ಇಹಲೋಕ ತ್ಯಜಸಿರುವ ಭಾರತದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ ದೆಹಲಿಯ ನಿಗಮಬೋಧ್ ಘಾಟ್‍ನಲ್ಲಿ ಸಿಖ್ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಭುತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್, ಪ್ರಧಾನಿ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೋನಿಯಾ ಗಾಂದಿ, ಸ್ಪೀಕರ್ ಓಂ ಬಿರ್ಲಾ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆರವರಿಂದ ಹಿಡಿದು ಪ್ರಮುಖ ಗಣ್ಯರು, ಕೈ ನಾಯಕರು, ಹಾಗೂ ವಿದೇಶಿ ರಾಜತಾಂತ್ರಿಕರು ಪಾಲ್ಗೊಂಡಿದ್ದರು. 3 ಸೇನಾಪಡೆಗಳಿಂದ ಗೌರವ ಸಮರ್ಪಣೆ ಮಾಡಲಾಯಿತು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕುರಿತು ಅಧ್ಯಕ್ಷ ಜೋ ಬೈಡನ್ ಸಂತಾಪ ಸೂಚಿಸಿದ್ದು ಅವರ ಮಾತನ್ನು ಶ್ವೇತಭವನ ಬಿಡುಗಡೆ ಮಾಡಲಾಗಿದೆ. ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡ ದುಃಖದಲ್ಲಿ ಭಾರತದ ಜನರೊಂದಿಗೆ ನಾವು ಸೇರಿದ್ದೇವೆ. ಜಿಲ್ ಮತ್ತು ನಾನು ಮಾಜಿ ಪ್ರಥಮ ಮಹಿಳೆ ಗುರುಶರಣ್ ಕೌರ್, ಅವರ 3 ಮಕ್ಕಳು ಮತ್ತು ಭಾರತದ ಎಲ್ಲಾ ಜನರಿಗೆ ನಮ್ಮ ಆಳವಾದ ಸಂತಾಪವನ್ನು ಸೂಚಿಸುತ್ತೇವೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಅಲ್ಲಿಂದ ಎಐಸಿಸಿ ಕೇಂದ್ರ ಕಚೇರಿಗೆ ಸಿಂಗ್ ಅವರ ಪಾರ್ಥಿವ ಶರೀರವನ್ನು ಕರೆದೊಯ್ಯಲಾಯಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಬೆಳಗ್ಗೆ 9.30ರವರೆಗೆ ಅಲ್ಲಿಯೇ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ತದನಂತರ ಅಲ್ಲಿಂದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ರವರ ಅಂತಿಮ ಯಾತ್ರೆ ಆರಂಭವಾಯಿತು. ಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಅಭಿಮಾನಿಗಳು ಪಾಲ್ಗೊಂಡಿದ್ದು, ಲಕ್ಷಾಂತರ ಜನರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.