ಸಿಲಿಂಡರ್ ಸ್ಫೋಟ ಕೇಸ್: ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು.

29

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ಆಸ್ಪತ್ರೆ ಸೇರಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8 ಕ್ಕೇರಿದೆ. ಪ್ರಕಾಶ ಬಾರಕೇರ ಎಂಬುವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 9 ಜನ ಮಾಲಾಧಾರಿಗಳು ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು. ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ 8 ಮಂದಿ ಮೃತಪಟ್ಟಿದ್ದಾರೆ. 25% ಗಾಯಗೊಂಡಿದ್ದ 12 ವರ್ಷ ವಿನಾಯಕ ಬಾರಕೇರ ಎಂಬ ಮಾಲಾಧಾರಿ ಬಾಲಕ ಮಾತ್ರ ಬದುಕಿಳಿದ್ದು, ಇನ್ನು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಳೆದ ಭಾನುವಾರ ಬೆಳಗ್ಗೆ ಹುಬ್ಬಳ್ಳಿ ಅಚ್ಚವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ, ಮಾಲಾಧಾರಿಗಳು ಮಲಗಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಸಕಾಲದಲ್ಲಿ ಎಲ್ಲಾ ಮಾಲಾಧಾರಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪರಿಣಾಮ, ಬೆಂಗಳೂರಿನ ನುರಿತ ವೈದ್ಯರು ಮತ್ತು ಕಿಮ್ಸ್ ನಿರ್ದೇಶಕ ಎಸ್.ಎಫ್. ಕಮ್ಮಾರ ನೇತೃತ್ವದ ತಂಡ ಗಾಯಾಳುಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಡಿಸೆಂಬರ್ 23 ರಿಂದ 31 ರ ನಡುವೆ, ಸಂಜಯ್ ಸವದತ್ತಿ, ನಿಜಲಿಂಗಪ್ಪ ಬೇಪುರಿ, ಮಂಜುನಾಥ ವಾಗ್ಮೋಡೆ, ರಾಜು ಮುಗೇರಿ, ತೇಜಸ್ವಿ ಸಾತ್ರೆ, ಲಿಂಗರಾಜ್ ಬಿರನೂರು, ಪ್ರಕಾಶ್ ಬಾರಕೇರ ಮತ್ತು ಶಂಕರ್ ಚಹ್ವಾಣ್ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿದ್ದು, ಸಾವನ್ನಪ್ಪಿದವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.