ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರು ನನ್ನ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಇಂದು ಮಾತಿನ ದಾಳಿ ನಡೆಸಿದ್ದಾರೆ. ಮಾಧ್ಯಮಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಗುತ್ತಿಗೆದಾರ ಸಚಿನ್ ಪಾಂಚಲ್ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಗಳಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ಹೇಳಿದರು. ಸಂತೋಷ್ ಪಾಟೀಲ್ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2022, ಏಪ್ರಿಲ್ 12 ರಂದು ಉಡುಪಿಯ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುತ್ತಿಗೆದಾರರ ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿ ಅಂದಿನ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೆಸರು ಉಲ್ಲೇಖಿಸಿದ್ದರು. ಹಾಗೇ ಹೆಂಡತಿ ಮಕ್ಕಳಿಗೆ ಪರಿಹಾರ ಕೊಡಬೇಕು ಎಂದು ತಿಳಿಸಿದ್ದರು. ಆದರೆ ಗುತ್ತಿಗೆದಾರ ಸಚಿನ್ ಪಾಂಚಲ್ ಡೆತ್ ನೋಟ್ ನಲ್ಲಿ ನನ್ನ ಹೆಸರು ಏಲ್ಲಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಗರು ಸಹಾಯ ಮಾಡಿದ್ದಾರಾ, ಹಾಗೂ ಸಂತೋಷ್ ಪಾಟೀಲ್ ಕುಟುಂಬವನ್ನು ಬಿಜೆಪಿಯವರು ಇಲ್ಲಿಯವರೆಗೂ ಏಕೆ ಭೇಟಿ ಮಾಡಲಿಲ್ಲ. ಮೊಸಳೆ ಕಣ್ಣೀರು ಸುರಿಸಿದರೆ ರಾಜ್ಯದ ಜನರೆಲ್ಲ ಮೋಸ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.










