ಹೆಚ್‍ಎಂಪಿವಿ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.

31

ಬೆಂಗಳೂರು: ಕೊರೊನಾ ಕೊಟ್ಟ ಹೊಡೆತದಿಂದ ಜನರು ಇನ್ನೂ ಹೊರಬಂದಿಲ್ಲ. ಹೀಗಿರುವಾಗಲೇ ಚೀನಾದಲ್ಲಿ ಮತ್ತೊಂದು ವೈರಸ್ ರಣಕೇಕೆ ಹಾಕುತ್ತಿದೆ. ಇದೀಗ ಬೆಂಗಳೂರಿನಲ್ಲೂ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ಪತ್ತೆಯಾಗಿದ್ದು, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತಾಗಿದೆ. ಇದರ ಬೆನ್ನಲ್ಲೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್‍ಎಂಪಿವಿ ವೈರಸ್ ಕುರಿತು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ. ಆರೋಗ್ಯಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ಇದು ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್‍ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಹೆಚ್‍ಎಂಪಿ ವೈರಸ್‍ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಚೀನಾದಲ್ಲಿ ಮ್ಯೂಟೆಟ್ ಆಗಿದೆಯೋ ಏನೋ ನನಗೆ ಗೊತ್ತಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ವರದಿ ನೀಡಬೇಕು. ದೇಶದಲ್ಲಿ ಹೆಚ್‍ಎಂಪಿ ವೈರಸ್ ರೀತಿ ನೂರಾರು ವೈರಸ್‍ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್‍ಎಂಪಿವಿ ವೈರಸ್ ಪತ್ತೆಹಚ್ಚಲಾಗಿತ್ತು. ಎಂಟು ತಿಂಗಳ ಮಗು ನಾರ್ಮಲ್ ಆಗಿದ್ದು, ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್ ಆಗಲಿದೆ ಎಂದು ತಿಳಿಸಿದ್ದಾರೆ.