ದೇಶದ ಹಿರಿಯ ಗಗನಯಾತ್ರಿ ಮತ್ತು ಕ್ರಯೋಜೆನಿಕ್ ಎಂಜಿನ್ ತಜ್ಞ ವಿ. ನಾರಾಯಣನ್ ಇಸ್ರೋದ ನೂತನ ಅಧ್ಯಕ್ಷರಾಗಲಿದ್ದಾರೆ. ಹಾಲಿ ಮುಖ್ಯಸ್ಥ ಎಸ್. ಸೋಮನಾಥ್ 2 ವರ್ಷಗಳ ಅಧಿಕಾರದ ಅವಧಿ ಪೂರ್ಣಗೊಳಿಸಿದ ಬಳಿಕ ಜ.14ರಂದು ನಿವೃತ್ತರಾಗಲಿದ್ದಾರೆ. ನಾರಾಯಣನ್ ಪ್ರಸ್ತುತ ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಎಲ್‍ಪಿಎಸ್‍ಸಿಯ ನಿರ್ದೇಶಕರಾಗಿದ್ದಾರೆ. ವಲಿಯಮಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 2 ವರ್ಷಗಳ ಅವಧಿಗೆ ಇಸ್ರೋ ಅಧ್ಯಕ್ಷ ಹುದ್ದೆಯಲ್ಲಿರುತ್ತಾರೆ. ವಿ. ನಾರಾಯಣನ್ ಅವರು ಆದಿತ್ಯ ಬಾಹ್ಯಾಕಾಶ ನೌಕೆ ಮತ್ತು GSLV MK-III ಮಿಷನ್‍ನಂತಹ ಪ್ರಮುಖ ಯೋಜನೆಗಳಿಗೆ ಗಮನಾರ್ಹ ಕೊಡುಗೆ ನೀಡಿದವರು. ಇವರ ಪರಿಣತಿ ಮತ್ತು ಸಾಧನೆಗಳನ್ನು ಗುರುತಿಸಿ ಹಲವು ಪ್ರಶಸ್ತಿಗಳು ದೊರಕಿವೆ. ಭಾರತದ ಆಸ್ಟ್ರೋನಾಟಿಕಲ್ ಸೊಸೈಟಿಯಿಂದ ಶ್ರೀ ಪ್ರಶಸ್ತಿ ಮತ್ತುIIT ಖರಗ್‍ಪುರದಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಾರಾಯಣನ್ ಅವರು ಐಐಟಿ ಖರಗ್‍ಪುರದಿಂದ ಕ್ರಯೋಜೆನಿಕ್ ಎಂಜಿನಿಯರಿಂಗ್‍ನಲ್ಲಿ ಎಂ.ಟೆಕ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ. ಎಂ.ಟೆಕ್‍ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದರು. 1984ರಲ್ಲಿ ಇಸ್ರೋ ಸೇರಿದ ಇವರು ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ವಿಭಾಗದಲ್ಲಿ ಪರಿಣತರಾಗಿದ್ದಾರೆ.










