ತಿರುಪತಿ ತಿರುಮಲದಲ್ಲಿ ಕಾಲ್ತುಳಿತ, 6 ಭಕ್ತರ ಸಾವು.

30

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 7 ಜನರ ಪೈಕಿ ಒಬ್ಬರನ್ನು ಬಳ್ಳಾರಿ ಮೂಲದ ಮಹಿಳೆ ಎಂದು ಗುರ್ತಿಸಲಾಗಿದೆ. ಮೃತರನ್ನು ಬಳ್ಳಾರಿ ಮೂಲದ ನಿರ್ಮಲಾ ಎಂದು ಗುರುತಿಸಲಾಗಿದೆ. ಕಾಲ್ತುಳಿತ ದುರಂತದಲ್ಲಿ 5 ಮಂದಿ ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು 6 ಜನ ಮೃತಪಟ್ಟಿದ್ದಾರೆ. 6 ಮಂದಿ ಮೃತರನ್ನು ವಿಶಾಖಪಟ್ಟಣದ ರಜನಿ, ವೈಜಾಗ್‍ನ ಲಾವಣ್ಯ, ಶಾಂತಿ, ಆಂಧ್ರದ ನರಸೀಪಟ್ಟಣಂ ನಿವಾಸಿ ಬೊದ್ದೇಟಿ ನಾಯ್ಡುಬಾಬು ಹಾಗೂ ತಮಿಳುನಾಡಿನ ಸೇಲಂ ನಿವಾಸಿ ಮಲ್ಲಿಕಾ ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ನಾಲ್ವರ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‍ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಲಾಗಿದೆ. ಆದರೆ, ಟೋಕನ್‍ಗಳಿಗಾಗಿ ನಿನ್ನೆ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ತೆರಳಿದ್ದರು. ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.