ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಕಂಡರಿಯದ ಕಡ್ಗಿಚ್ಚು, ಅಪಾರ ಹಾನಿ.

25

ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ದುರ್ಘಟನೆಯಲ್ಲಿ ಈವರೆಗೆ 5 ಮಂದಿ ಸಜೀವ ದಹನವಾಗಿದ್ದಾರೆ. ಈ ನಡುವೆ 1 ಲಕ್ಷ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು ಒಂದು ಸಾವಿರದ ಐನೂರು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಮಾಹಿತಿಗಳು ತಿಳಿಸಲಾಗಿದೆ. ಲಾಸ್ ಏಂಜಲೀಸ್‍ನಾದ್ಯಂತ ನಿಯಂತ್ರಣ ಮೀರಿದ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿರುವುದರಿಂದ, ಸನ್‍ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್‍ನಲ್ಲಿ ಕಾಣಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಸಾಂಟಾ ಅನಾ ಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಹಾಲಿವುಡ್ ಬೌಲೆವಾರ್ಡ್‍ನಿಂದ 100 ಮೀಟರ್ ದೂರದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ಐತಿಹಾಸಿಕ ಹಾಲಿವುಡ್‍ನ ಹೃದಯಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ನಿನ್ನೆಯೇ ಆದೇಶ ನೀಡಲಾಗಿದೆ. ಜೊತೆಗೆ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.