ರಾಜ್ಯ ಬಜೆಟ್ : ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ, ನಾಳೆಯಿಂದ ಪೂರ್ವಭಾವಿ ಸಭೆ.

37

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಬಜೆಟ್’ಗೆ ಸಿಎಂ ಸಿದ್ದರಾಮಯ್ಯ ಅವರು ಸಿದ್ಧತೆ ಆರಂಭಿಸಿದ್ದು, ಗುರುವಾರದಿಂದ ಐದು ದಿನಗಳ ಕಾಲ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರು, ನಾಳೆ 13 ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಬಳಿಕ ಶುಕ್ರವಾರ, ಶನಿವಾರ, ಸೋಮವಾರ ಮತ್ತು ಮುಂದಿನ ಗುರುವಾರ ಮತ್ತಷ್ಟು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ ಕಚೇರಿ ಕಟ್ಟಡದಲ್ಲಿ ಬಜೆಟ್ ಪೂರ್ವ ಸಭೆಗಳು ನಡೆಯಲಿವೆ. 30 ನಿಮಿಷಗಳ ಸಭೆಗಳಲ್ಲಿ, ಮುಖ್ಯಮಂತ್ರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಇಲಾಖೆಯ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲಿದ್ದಾರೆ. ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಅವರು, ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ಸವಾಲನ್ನು ಎದುರಿಸುತ್ತಿದ್ದಾರೆ. 25-26 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 14 ರಂದು ಮಂಡಿಸಲಿದ್ದು, ಇದು ಸಿದ್ದರಾಮಯ್ಯ ಅವರ 16ನೇ ದಾಖಲೆಯ ಬಜೆಟ್ ಮಂಡನೆಯಾಗಿರಲಿದೆ.