ವಿವಿಧ ಸಮಾರಂಭಗಳಿಗೆ ಮದ್ಯ ಪೂರೈಕೆಗೆ ಅನುಮತಿ ಕಡ್ಡಾಯಗೊಳಿಸಿದ ಅಬಕಾರಿ ಇಲಾಖೆ.

60

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿವಿಧ ಸಭೆ, ಸಮಾರಂಭಗಳು, ವಿವಾಹಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ಕಡ್ಡಾಯಗೊಳಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಕಲ್ಯಾಣಮಂಟಪ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ವಿವಿಧೆಡೆ ನಡೆಯುವ ಸಭೆ ಸಮಾರಂಭ, ಮದುವೆ, ನಾಮಕರಣ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಮದ್ಯ ಪೂರೈಕೆ ಮಾಡುವಂತಿಲ್ಲ. ಸಮಾರಂಭ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಸಿಎಲ್-5 ಸನ್ನದು ಪಡೆದು ಮದ್ಯ ಪೂರೈಸಬಹುದು ಎಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ದಿನವೊಂದಕ್ಕೆ 11,500 ರೂಪಾಯಿ ಪಾವತಿಸಿ ಅನುಮತಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ. ಯಾವುದೇ ಸಭೆ ಸಮಾರಂಭಗಳಲ್ಲಿ ಮದ್ಯ ಪೂರೈಕೆ ಮಾಡಲು ಸಿಎಲ್ 5 ತಾತ್ಕಾಲಿಕ ಅನುಮತಿ ಪಡೆಯುವುದು ಹೊಸ ನಿಯಮವೇನಲ್ಲ. ಹಲವು ದಶಕಗಳಿಂದಲೇ ಈ ನಿಯಮ ಎಲ್ಲ ಕಡೆ ಜಾರಿಯಲ್ಲಿದೆ. ಆದರೆ ಕೊಡಗು ಚಿಕ್ಕಮಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಮದ್ಯ ಪೂರೈಸುವುದು ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೀಗಾಗಿ ಈ ನಿಯಮಗಳನ್ನು ಕಡ್ಡಾಯಗೊಳಿಸಿರಲಿಲ್ಲ. ಆದರೆ, ಇದೀಗ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಡಿಕೇರಿ ಅಬಕಾರಿ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.