ಮುರಿದ ಸೀಟ್ ನೀಡಿ ಮೋಸ ಮಾಡಿದ್ದೀರಿ: ಏರ್ ಇಂಡಿಯಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಕಿಡಿ.

63

ನವದೆಹಲಿ: ಏರ್ ಇಂಡಿಯಾದ ಕೆಟ್ಟ ಸೇವೆಗೆ ಕೇಂದ್ರ ಕೃಷಿ ಸಚಿವ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಿಡಿಕಾರಿದ್ದಾರೆ. ಮುರಿದ ಸೀಟನ್ನು ನೀಡಿದ್ದಕ್ಕೆ ಸಿಟ್ಟಾದ ಚೌಹಾಣ್ ಗ್ರಾಹಕರಿಗೆ ನೀವು ಮೋಸ ಮಾಡುತ್ತಿದ್ದೀರಿ. ಟಿಕೆಟ್‍ಗೆ ಪೂರ್ಣ ಶುಲ್ಕ ವಿಧಿಸಿದ ನಂತರ ಕೆಟ್ಟು ಹೋದ ಸೀಟ್ ಮೇಲೆ ಕುಳಿತುಕೊಳ್ಳುವಂತೆ ಹೇಳುವುದು ಅನೈತಿಕ. ಇದು ಪ್ರಯಾಣಿಕರಿಗೆ ಮಾಡುತ್ತಿರುವ ಮೋಸ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.
ಕೆಟ್ಟ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಏರ್ ಇಂಡಿಯಾವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವರಾಜ್ ಸಿಂಗ್ ಅವರ ಪೋಸ್ಟ್ ಪ್ರಕಟವಾದ ನಂತರ ಏರ್ ಇಂಡಿಯಾ ಕ್ಷಮೆಯಾಚನೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸದಂತೆ ನಾವು ಈ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ. ದಯವಿಟ್ಟು ನಿಮ್ಮನ್ನು ಸಂಪರ್ಕಿಸಲು ಅನುಕೂಲಕರ ಸಮಯದ ಬಗ್ಗೆ ನಮಗೆ ಡೈರೆಕ್ಟ್ ಮೆಸೇಜ್ ಮಾಡಿ ಎಂದು ಕೇಳಿಕೊಂಡಿದೆ.
ಇಂದು ನಾನು ಭೋಪಾಲ್‍ನಿಂದ ದೆಹಲಿಗೆ ಬಂದು ಪುಸಾದಲ್ಲಿ ಕಿಸಾನ್ ಮೇಳವನ್ನು ಉದ್ಘಾಟಿಸಿ, ಕುರುಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಮಿಷನ್‍ನ ಸಭೆಯನ್ನು ನಡೆಸಿ, ಚಂಡೀಗಢದಲ್ಲಿ ಕಿಸಾನ್ ಸಂಘಟನೆಯ ಗೌರವಾನ್ವಿತ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕಿತ್ತು. ದೆಹಲಿಗೆ ಬರುವ ಉದ್ದೇಶದಿಂದ ಏರ್ ಇಂಡಿಯಾ ವಿಮಾನ ಸಂಖ್ಯೆ AI436 ರಲ್ಲಿ ಟಿಕೆಟ್ ಬುಕ್ ಮಾಡಿದ್ದೆ, ನನಗೆ ಸೀಟ್ ಸಂಖ್ಯೆ 8C ನೀಡಲಾಗಿತ್ತು. ನಾನು ಹೋಗಿ ಸೀಟಿನಲ್ಲಿ ಕುಳಿತೆ. ಆದರೆ ಆ ಸೀಟು ಮುರಿದು ಹೋಗಿತ್ತು.
ಮುರಿದು ಹೋದ ಸೀಟನ್ನು ಯಾಕೆ ಹಂಚಿಕೆ ಮಾಡಲಾಗಿದೆ ಎಂದು ನಾನು ವಿಮಾನಯಾನ ಸಿಬ್ಬಂದಿಯನ್ನು ಕೇಳಿದಾಗ, ಅದಕ್ಕೆ ಅವರು, ಈ ಸೀಟು ಚೆನ್ನಾಗಿಲ್ಲ ಮತ್ತು ಅದರ ಟಿಕೆಟ್ ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಮೊದಲೇ ತಿಳಿಸಲಾಗಿತ್ತು ಎಂದು ಅವರು ನನಗೆ ಹೇಳಿದರು. ಆದರೆ ಈ ಒಂದು ಸೀಟು ಮಾತ್ರವಲ್ಲ ಇನ್ನು ಹಲವು ಸೀಟುಗಳು ಮುರಿದು ಹೋಗಿತ್ತು.
ಟಾಟಾ ಆಡಳಿತವನ್ನು ವಹಿಸಿಕೊಂಡ ನಂತರ ಏರ್ ಇಂಡಿಯಾದ ಸೇವೆ ಸುಧಾರಣೆಯಾಗಲಿದೆ ಎಂದು ನನ್ನ ಅನಿಸಿಕೆಯಾಗಿತ್ತು. ಆದರೆ ಅದು ನನ್ನ ತಪ್ಪು ಕಲ್ಪನೆ ಎನ್ನುವುದು ಈಗ ನನಗೆ ಅರಿವಾಗಿದೆ. ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರವನ್ನು ಪಡೆದ ನಂತರ ಕೆಟ್ಟ ಮತ್ತು ಅನಾನುಕೂಲಕರವಾದ ಆಸನಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುವುದು ಅನೈತಿಕ. ಇದು ಪ್ರಯಾಣಿಕರನ್ನು ಮೋಸಗೊಳಿಸುವುದಿಲ್ಲವೇ ಎಂದು ಕಿಡಿಕಾರಿದ್ದಾರೆ.