ಕಳಸ: ತಾಲೂಕು ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬರು ವೈದ್ಯರಿಲ್ಲದೆ ಮೃತದೇಹವನ್ನ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ ಹಾಗೇ ವಾಪಸ್ ತೆಗೆದುಕೊಂಡು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆಯೇ ಆರೋಗ್ಯ ಸರಿ ಇಲ್ಲ ಎಂದು ಹೊರನಾಡು ಮೂಲದ ರವಿ ಎಂಬಾತನನ್ನ ಕುಟುಂಬಸ್ಥರು ಆಸ್ಪತ್ರೆ ಕರೆತಂದಿದ್ದರು. ಆದರೆ, ಆತ ಆಸ್ಪತ್ರೆಗೆ ಬಂದ ಮೇಲೆ ಸಾವನ್ನಪ್ಪಿದ್ದನೋ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದನೋ ಕುಟುಂಬಸ್ಥರಿಗೆ ತಿಳಿದಿಲ್ಲ. ಆದರೆ, ಆಸ್ಪತ್ರೆಯಲ್ಲಿ ಓರ್ವ ವೈದ್ಯ ಕೂಡ ಇಲ್ಲದ ಕಾರಣ ಆತನಿಗೆ ಸೂಕ್ತ ಚಿಕಿತ್ಸೆಯೇ ಸಿಕ್ಕಿಲ್ಲ. ಆತ ಸಾವನ್ನಪ್ಪಿದ ಬಳಿಕ ಮರಣೋತ್ತರ ಪರೀಕ್ಷೆಯನ್ನೂ ಮಾಡಿಲ್ಲ. ಕುಟುಂಬಸ್ಥರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಾದು ಮೃತದೇಹವನ್ನ ಹಾಗೇ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯನೂ ಇಲ್ಲ ಎಂದು ಕೂಲಿ ಕಾರ್ಮಿಕರೇ ಹೆಚ್ಚಿರುವ ಕಳಸ ತಾಲೂಕಿನ ಜನ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಿತ್ಯ ಆಸ್ಪತ್ರೆಗೆ ಬರುವ ನೂರಾರು ಕಾಯಿಲೆಯ ಜನ ಬಂದು-ಬಂದು ವಾಪಸ್ ಹೋಗುತ್ತಿದ್ದಾರೆ. ಗರ್ಭೀಣಿಯರು, ಬಾಣಂತಿಯರು ಪಕ್ಕದ ಬಾಳೆಹೊನ್ನೂರು, ಕೊಪ್ಪ ಆಸ್ಪತ್ರೆಗಳಿಗೆ ಹೋಗುವಂತಾಗಿದೆ. ಹಾಗಾಗಿ, ಕಳಸ ತಾಲೂಕು ಘೋಷಣೆಯಾದ ಐದಾರು ವರ್ಷಗಳಿಂದ ಇದೇ ಗೋಳಾಗಿದೆ. ಸರ್ಕಾರ ಕೂಡಲೇ ನಮಗೊಬ್ಬರು ಖಾಯಂ ವೈದ್ಯರನ್ನ ನೇಮಿಸಬೇಕೆಂದು ಜನ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.










