ಯುದ್ದ ದ್ವೇಷವನ್ನು ಹುಟ್ಟುಹಾಕಿ ಎಲ್ಲವನ್ನೂ ನಾಶ ಮಾಡುತ್ತದೆ.- ಕುಂದೂರು ಅಶೋಕ್…

356
firstsuddi

ಚಿಕ್ಕಮಗಳೂರು: ಮನುಷ್ಯ ಸುಖ, ಸಂತೋಷ, ನೆಮ್ಮದಿಯಿಂದ ಸಹಬಾಳ್ವೆ ನಡೆಸಬೇಕಾದರೆ ಯುದ್ದದ ಮನಸ್ಥಿತಿಯಿಂದ ಹೊರಬರಬೇಕು, ಮನದಲ್ಲಿ ಪ್ರೀತಿ, ಪ್ರೇಮಮತ್ತು ಕರುಣೆಯನ್ನು ತುಂಬಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಲಾ ತಂಡದಿಂದ ಮಂಗಳವಾರ ನಡೆದ ರಾಷ್ಟ್ರಕವಿ ಕುವೆಂಪು ವಿರಚಿತ ಸ್ಮಶಾನ ಕುರುಕ್ಷೇತ್ರಂ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಪಂಚದ ಚರಿತ್ರೆಯಲ್ಲಿ 5 ಸಾವಿರಕ್ಕೂ ಹೆಚ್ಚು ಯುದ್ದಗಳು ನಡೆದು ಹೋಗಿವೆ, ಅವುಗಳಿಂದಾದ ವಿನಾಶ ಎಲ್ಲರಿಗೂ ತಿಳಿದಿದೆ ಆದರೂ ಇನ್ನೂ ಎಲ್ಲರಲ್ಲೂ ಯುದ್ದದ ಮನಸ್ಥಿತಿ ಜೀವಂತವಾಗಿದೆ ಎಂದು ವಿಷಾದಿಸಿದರು.ಭಾಷೆ, ಪ್ರಾಂತ್ಯ, ಮತ, ಧರ್ಮ, ಜಾತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಎಲ್ಲರಲ್ಲೂ ಇಂದಿಗೂ ಯುದ್ದದ ಮನಸ್ಥಿತಿ ಇದೆ, ದ್ವೇಷ, ಅಸೂಯೆ, ಅಹಂಕಾರ ತುಂಬಿಕೊಂಡಿದೆ, ಇದರಿಂದಾಗಿ ಸುಖ, ಸಂತೋಷ, ನೆಮ್ಮದಿ ಮತ್ತು ಸಹಬಾಳ್ವೆ ಮರೀಚಿಕೆಯಾಗಿದೆ ಎಂದರು.ಯುದ್ದ ದ್ವೇಷವನ್ನು ಹುಟ್ಟುಹಾಕಿ ಎಲ್ಲವನ್ನೂ ನಾಶ ಮಾಡುತ್ತದೆ ಆದರೆ ಪ್ರೀತಿ, ಕರುಣೆ, ಸೌಹಾರ್ದ ಮತ್ತು ಸಹಬಾಳ್ವೆಯನ್ನು ಕಟ್ಟಿಕೊಡುತ್ತದೆ ಎಂದ ಅವರು ಮನುಷ್ಯರು ಇದನ್ನು ಅರಿತು ಯುದ್ದದ ಮನಸ್ಥಿತಿಯಿಂದ ಹೊರಬಂದು ಬದುಕುವ ಅಗತ್ಯವಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಎಸ್.ಡಿ.ಚಂದ್ರಶೇಖರ್ ಪಠ್ಯದಲ್ಲಿರುವ ನಾಟಕವನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಸುವ ಉದ್ಧೇಶದಿಂದ ಈ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ|| ವಿನ್ಸೆಂಟ್ ಕಾರ್ಡೋಜ ಕಾರ್ಯಕ್ರವiಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|| ಎಸ್.ಎಂ.ಮುತ್ತಯ್ಯ ಉಪನ್ಯಾಸ ನೀಡಿದರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ|| ಕೆ.ದಾಮೋದರ ಗೌಡ, ಎಸ್.ಆರ್.ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ|| ಸಿ.ಎ.ಶರತ್, ಉಪನ್ಯಾಸಕರಾದ ವಿನಯ್ ಕುಮಾರ್, ದೀಪ್ತಿ, ಕೆಂಚಯ್ಯ, ಹೇಮರಾಜ್, ನಾಟಕದ ನಿರ್ದೇಶಕ ಜಿ.ಆರ್.ಲವ ಉಪಸ್ಥಿತರಿದ್ದರು.