ಬೊಲೆರೋ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ-7 ಮಂದಿ ದುರ್ಮರಣ…

145
firstsuddi

ಬೆಳಗಾವಿ : ಬೊಲೆರೋ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ ಟಾಟಾ ಏಸ್ ಚಾಲಕ ಹಾಗೂ ಆರು ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. ರಾಮದುರ್ಗ ತಾಲ್ಲೂಕಿನ ಚಿಂಚನೂರು ಗ್ರಾಮದ ನಿವಾಸಿಗಳಾದ ಮೃತರೆಲ್ಲರೂ ಟಾಟಾ ಏಸ್‍ನಲ್ಲಿ ಧಾರವಾಡದ ಮೊರಬ ಗ್ರಾಮಕ್ಕೆ ಕೂಲಿ ಕೆಲಕ್ಕೆಂದು ತೆರಳುತ್ತಿದ್ದರು. ಈ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬೊಲೆರೋ ವಾಹನಕ್ಕೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಗೊಂಡವರನ್ನು ಸವದತ್ತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.