ಮುಂಬೈ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಸಾಮಾನ್ಯ ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ. ಅಲ್ಲದೆ ತಮ್ಮ ನಿಜ ಜೀವನದ ಮಾಹಿತಿ ಹೊರಹಾಕುತ್ತಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಪಿಹೆಚ್‌ಡಿ ವಾಣಿಜ್ಯ ಮಂಡಳಿ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ರಾಹುಲ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಾಕ್ಸರ್ ವಿಜೆಂದರ್ ಸಿಂಗ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಶ್ನೆಯನ್ನು ಮಾಡಿದ್ದರು. ರಾಜಕಾರಣಿಗಳು ಯಾಕೆ ಕ್ರೀಡೆಗಳಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ವಿಶ್ವ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ ಕೇಳಿದ ಸಹಜ ಪ್ರಶ್ನೆಗೆ ರಾಹುಲ್ ಗಾಂಧಿ ತಮ್ಮನ್ನು ತಾವು ಕ್ರೀಡಾಪಟು ಎಂದು ಹೇಳಿಕೊಂಡಿದ್ದಾರೆ. ಐಕಿಡೋ ಎಂಬ ಜಪಾನಿ ಮಾರ್ಷಲ್ ಆರ್ಟ್‌ನಲ್ಲಿ ತಾವೂ ಬ್ಲ್ಯಾಕ್ ಬೆಲ್ಟ್ ಹೊಂದಿರುವುದಾಗಿ ತಿಳಿಸಿದ್ದಾರೆ. ಇದರ ಜತೆಗೆ ಪ್ರತಿ ದಿನ ತಾವು 1 ತಾಸನ್ನು ಆಟಕ್ಕಾಗಿ ಮೀಸಲಿಟ್ಟಿದ್ದು, ರನ್ನಿಂಗ್, ಸ್ವಿಮ್ಮಿಂಗ್ ಮಾಡುವುದಾಗಿ ತಿಳಿಸಿದ್ದಾರೆ.