ಚಿಕ್ಕಮಗಳೂರು : ಚುನಾವಣೆ ಸಂದರ್ಭದಲ್ಲಿ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಕಾನೂನು ಬಾಹಿರ ರೀತಿಯಲ್ಲಿ ಹಣ ವರ್ಗಾವಣೆಯಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು. ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಪೂರ್ವಸಿದ್ದತೆಗಾಗಿ ಮೈಕ್ರೋ ಅಬ್ಸರ್‍ವರ್ ಮತ್ತು ಬ್ಯಾಂಕ್ ಸಿಬ್ಬಂದಿಗಳೊಂದಿಗಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸ್ಥಳೀಯ ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಚುನಾವಣೆ ಸಮಯದಲ್ಲಿ ಯಾವುದೇ ಖಾತೆಯಿಂದ ನಿಗಧಿತ ಹಣಕ್ಕಿಂತ ಹೆಚ್ಚು ವರ್ಗಾವಣೆ ಆದಲ್ಲಿ ಅಥವಾ ಜಮೆ ಮಾಡಿದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಚುನಾವಣೆ ಪ್ರಕ್ರಿಯೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಚುನಾವಣೆ ಸಮಯದಲ್ಲಿ ಯಾವುದೇ ರೀತಿಯ ನಿಯಮ ಬಾಹಿರ ಹಣ ವರ್ಗಾವಣೆ ಮಾಡುವುದನ್ನು ತಪ್ಪಿಸಲು ತಂಡ ರಚಿಸಲಾಗಿರುತ್ತದೆ. ಅಭ್ಯರ್ಥಿಯು ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಖಾತೆ ತೆರೆಯುವ ಮೂಲಕ ಚುನಾವಣಾ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗುತ್ತದೆ, ಹಾಗೂ ಅಭ್ಯರ್ಥಿಯು ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುತ್ತಾರೆ ಎಂದು ಹೇಳಿದರು.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹೆಚ್ಚು ನಗದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಅದಕ್ಕೆ ಅಗತ್ಯ ದಾಖಲಾತಿ ಹೊಂದಿರಬೇಕು. ಒಂದು ಬ್ಯಾಂಕ್ ತನ್ನ ಇನ್ನೊಂದು ಶಾಖೆಗೆ ಹಣ ವರ್ಗಾವಣೆ ಮಾಡುವಾಗ ಮೊದಲು ಚುನಾವಣೆಗೆ ನೇಮಿಸಲಾಗಿರುವ ವಿಶೇಷ ತಂಡದ ಗಮನಕ್ಕೆ ತರಬೇಕು ಜೊತೆಗೆ ಅಗತ್ಯ ದಾಖಲಾತಿ ಹೊಂದಿರಬೇಕು ಎಂದು ಹೇಳಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಒಬ್ಬ ಅಭ್ಯರ್ಥಿಯು ಚುನಾವಣೆ ಸಂದರ್ಭದಲ್ಲಿ ೨೮ ಲಕ್ಷದ ವರೆಗೆ ಮಾತ್ರ ಜಮೆ ಮಾಡಬಹುದಾಗಿದೆ ಹಾಗೂ ವೆಚ್ಚ ಮಾಡಬಹುದಾಗಿದೆ. ಆದರೆ, ಅಭ್ಯರ್ಥಿಯು ತನ್ನ ಖಾತೆಯಿಂದ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವಂತಿಲ್ಲ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಪ್ರಸ್ತುತ ಕೂಲಿ ಕಾರ್ಮಿಕರು ದಿನದ ಅಥವಾ ವಾರದಲ್ಲಿ ಎಷ್ಟು ಕೂಲಿ ಪಡೆಯುತ್ತಿದ್ದಾರೋ ಅದಕ್ಕಿಂತ ಹೆಚ್ಚು ಹಣ ಅಥವಾ ಕೂಲಿ ನೀಡುವಂತಿಲ್ಲ ಎಂದ ಅವರು ಹೆಚ್ಚು ಹಣ ನೀಡುವ ಮಾಹಿತಿ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಆದಾಯ ತೆರಿಗೆ ಅಧಿಕಾರಿಗಳು, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.