ಬೆಂಗಳೂರು : ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಪ್ರಕರಣದ ಕುರಿತು ನಾನು ಈ ಹಿಂದೆ ವಿನಯ್ ಕುಲಕರ್ಣಿ ಅವರೊಂದಿಗೆ ಚರ್ಚೆ ಮಾಡಿದ್ದೆ. ವಿನಯ್ ಕುಲಕರ್ಣಿ ಒಬ್ಬ ಬಲಿಷ್ಠ ನಾಯಕ. ಈ ಹಿಂದೆ ಓರ್ವ ಮಂತ್ರಿ ವಿನಯ್ ಕುಲಕರ್ಣಿ ಅವರನ್ನು ಬಿಜೆಪಿ ಸೇರಲು ಹೇಳಿದ್ದರು. ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗಾ ಕೆಲವು ಬಿಜೆಪಿ ನಾಯಕರಿಗೆ ಸಂತೋಷವಾಗಿರಬೇಕು. ಇದು ಶಾಶ್ವತವಾಗಿ ಇರುವುದಿಲ್ಲ. ಯಾವುದೇ ರಾಜಕೀಯ ಒತ್ತಡಕ್ಕೆ ಸಿಬಿಐ ಅಧಿಕಾರಿಗಳು ಒಳಗಾಗುವುದು ಬೇಡ. ರಾಜಕೀಯ ಚಕ್ರ ತಿರುಗುತ್ತಿರುತ್ತದೆ. ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಿಬಿಐ ಅಧಿಕಾರಿಗಳು ಕಾನೂನಿಗೆ ಬದ್ಧರಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದರು.










