ಚಿಕ್ಕಮಗಳೂರು : ಬೀಗರ ಔತಣಕ್ಕೆ ತೆರಳಿದ್ದ ಐವರು ಯುವಕರು ನೀರುಪಾಲಾಗಿರುವ ಘಟನೆ ತಾಲ್ಲೂಕಿನ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ. ರಘು(22), ಸುದೀಪ್(22), ಸಂದೀಪ್(23), ದಿಲೀಪ್(24) ಹಾಗೂ ದೀಪಕ್(25)ಮೃತ ಯುವಕರು ಎಂದು ಗುರುತಿಸಲಾಗಿದೆ. ಮೃತ ಯುವಕರು ಕಿರೇಕೆರೆಗೆ ಈಜಲು ತೆರಳಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂಧಿ ಕಾರ್ಯಾಚರಣೆ ನಡೆಸಿ ಸಂದೀಪ್ ಎಂಬ ಯುವಕನ ಮೃತದೇಹವನ್ನು ಹೊರತೆಗೆದಿದ್ದು, ಇನ್ನೂ ನಾಲ್ವರು ಯುವಕರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಮೃತರಲ್ಲಿ ಇಬ್ಬರು ಸ್ಥಳೀಯ ಯುವಕರಾಗಿದ್ದು, ಮೂವರು ಯುವಕರು ಬೀಗರ ಔತಣಕ್ಕೆ ಬಂದವರು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










