ಟಿಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ ಶಿಕ್ಷಕರು…

225
firstsuddi

ಚಿಕ್ಕಮಗಳೂರು: ನಗರದ ಟಿಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸಂಸ್ಥೆಯ ಶಿಕ್ಷಕರು ಕರ್ತವ್ಯವನ್ನು ಬಹಿಷ್ಕರಿಸಿ ಶಾಲೆಯ ಮುಂಭಾಗ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಶಾಲೆ ಆರಂಭಗೊಳ್ಳುತ್ತಿದ್ದಂತೆ ಪಾಠ ತ್ಯಜಿಸಿ ಸಂಸ್ಥೆಯ ಎದುರು ಧರಣಿ ಆರಂಭಿಸಿದ ಶಿಕ್ಷಕರು ಮಧ್ಯಾಹ್ನದ ವರೆಗೂ ಪ್ರತಿಭಟನೆ ಮುಂದುವರೆಸಿ ಅಧ್ಯಕ್ಷರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಕರು ಸಂಸ್ಥೆಯ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ತಮ್ಮ ಮೇಲೆ ಶೋಷಣೆ ಮತ್ತು ದಬ್ಬಾಳಿಕೆ ನಡೆಸುತ್ತಿದ್ದಾರೆ ವಿನಾ ಕಾರಣ ನೋಟಿಸ್ ನೀಡುವುದು, ಕರ್ತವ್ಯದಿಂದ ಅಮಾನತ್ತು ಪಡಿಸುವುದು ಸೇರಿದಂತೆ ಬಹಳಷ್ಟು ಕಿರುಕುಳ ನೀಡುತ್ತಿದ್ದಾರೆ, ಮುಖ್ಯ ಶಿಕ್ಷರೋರ್ವರನ್ನು ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ ಎಂದು ಆರೋಪಿಸಿದರು.
30-40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಮೂಲೆ ಗುಂಪು ಮಾಡಿ ಹೊಸಬರನ್ನು ತಂದು ಅವರಿಗೆ ಕೇಳಿದಷ್ಟು ಸಂಬಳ ನೀಡುತ್ತಿದ್ದಾರೆ, ಮಹಿಳಾ ಶಿಕ್ಷಕರನ್ನು ಕೀಳಾಗಿ ಕಾಣುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಮಗಾಗದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದು, ಮಾತೆತ್ತಿದರೆ ಪೋಲಿಸರಿಗೆ ಹೇಳಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಆಡಳಿತ ಮಂಡಳಿಯ ನಿರ್ದೇಶಕಿ ಗೀತಾ ಎಂ.ಎಲ್.ಮೂರ್ತಿ ಸಂಸ್ಥೆಯ ನಿರ್ದೇಶಕರುಗಳನ್ನು ಅಧ್ಯಕ್ಷರು ಕಾಲಕಸದಂತೆ ನೋಡುತ್ತಿದ್ದಾರೆ, ವಿಧಾನಪರಿಷತ್ ಮಾಜಿ ಸದಸ್ಯರೋರ್ವರು ಸೇರಿದಂತೆ ಕೆಲವರನ್ನು ವಿಶೇಷ ಆಹ್ವಾನಿತರನ್ನಾಗಿ ಸೇರಿಸಿಕೊಂಡು ಅವರಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಶಾಲೆಯಲ್ಲಿ ರಾಜಕೀಯವನ್ನು ಬೆರೆಸುತ್ತಿದ್ದಾರೆ ಎಂದು ದೂರಿದರು.
ಸಂಸ್ಥೆಯನ್ನು ಬೆಳೆಸಿದ ಹಿರಿಯ ನಿರ್ದೇಶಕರಾದ ಗೌರಮ್ಮ ಬಸವೇಗೌಡ, ಕಾತ್ಯಾಯಿನಿ ಚಂದ್ರಶೇಖರ್ ಮತ್ತು ಸುಲೋಚನ ಶೀನಿವಾಸಶೆಟ್ಟಿ ಅವರುಗಳನ್ನು ನೋಟೀಸ್ ಸಹ ನೀಡದೆ ಏಕಾಏಕಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದರು.
ಇನ್ನೋರ್ವ ನಿರ್ದೇಶಕಿ ಗೀತಾ ಸುಂದರೇಶ್ ಮಾತನಾಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಅಧ್ಯಕ್ಷರು ಸಂಸ್ಥೆಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ, ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಹಸಂಯೋಜಕ ಜಯರಾಂ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.