ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ 1.73 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ನಿರ್ಣಯವನ್ನು ನಗರದ ಎಪಿಎಂಸಿ ಯಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ವಾರ್ಷಿಕ ಸಭೆ ಕೈಗೊಂಡಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಈ ಹಣದಲ್ಲಿ ಎಪಿಎಂಸಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಸಂತೆ ಕಟ್ಟೆಯನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಕೆಲವು ಗ್ರಾಮಗಳಲ್ಲಿ ಸಂತೆ ಕಟ್ಟೆಯನ್ನು ನಿರ್ಮಿಸಲಾಗುವುದು ಎಂದರು.
ಎಪಿಎಂಸಿ ಇದುವರೆಗೆ ತನ್ನ ಸ್ವಂತ ಆದಾಯದ ಹಣದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನವನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ ಸದ್ಯದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು ಹೆಚ್ಚಿನ ಅನುದಾನ ಬಂದಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯನ್ನು ರೂಪಿಸಲಾಯಿತು, ನಿರ್ದೇಶಕರಾದ ಹೆಚ್.ಎಸ್.ಕವೀಶ್, ಬಿ.ಹೆಚ್.ಹರೀಶ್, ಹೆಚ್.ಪಿ.ರಾಜೀವ್, ಮಹೇಂದ್ರ, ಸುಜಾತಾ ಸುಬ್ರಾಯಗೌಡ, ಜಯಮ್ಮ, ಹೆಚ್.ಇ.ಪ್ರಕಾಶ್, ನೇತ್ರಾವತಿ, ಬಸವರಾಜ್, ಶಿವೇಗೌಡ, ಕಾರ್ಯದರ್ಶಿ ಅಭಿನಂದನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
Home ಸ್ಥಳಿಯ ಸುದ್ದಿ ತಾಲ್ಲೂಕಿನ ವಿವಿಧ ಗ್ರಾಮಗಳ ಸಂತೆ ಕಟ್ಟೆಯನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಕೆಲವು ಗ್ರಾಮಗಳಲ್ಲಿ ಸಂತೆ ಕಟ್ಟೆಯನ್ನು...










