ಚಿಕ್ಕಮಗಳೂರು : ದಾನ ಧರ್ಮ ಮತ್ತು ಸೇವೆಯಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ರಾಜ್ಯ ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ ಹೇಳಿದರು. ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಗೊಳಗಾಗಿರುವ ಕಾರ್ಮಿಕರಿಗೆ ನಗರದ ಬಸವನಹಳ್ಳಿಯ ಲಕ್ಷ್ಮೀ ನಿಲಯದಲ್ಲಿ ಬುಧವಾರ ಆಹಾರದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ನಾವು ಗಳಿಸಿದ ಆಸ್ತಿ, ಅಂತಸ್ತು ನಮ್ಮ ಹಿಂದೆ ಬರುವುದಿಲ್ಲ, ಹಣ, ಅಧಿಕಾರ ತೃಪ್ತಿ ನೀಡುವುದಿಲ್ಲ ಆದರೆ ದಾನ, ಧರ್ಮ, ಸೇವೆಯಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಅಲ್ಪ ಭಾಗವನ್ನಾದರೂ ಸಮಾಜಕ್ಕೆ ವಿನಿಯೋಗಿಸಬೇಕು, ಬಡವರು, ಅಶಕ್ತರಿಗೆ ನೆರವಿನ ಹಸ್ತ ಚಾಚಬೇಕು ಎಂದು ತಿಳಿಸಿದರು.
ಇದೇ ವೇಳೆ 55 ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಗಾಯತ್ರಿ ಅನಂತರಾಮಯ್ಯ, ರಮ್ಯಶ್ರೀ, ಆಶಾ ಶ್ರೀಧರ್, ಎಲ್.ಬಿ.ಸಾವಿತ್ರಿ, ಗೋಪಾಲಕೃಷ್ಣ ಹಾಜರಿದ್ದರು.










