ಚಿಕ್ಕಮಗಳೂರು : ಬೈಕ್-ಕಾರು ಮುಖಾಮುಖಿ ಡಿಕ್ಕಿ : ASI ಕನಸು ಕಂಡಿದ್ದ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು…

220
firstsuddi

ಚಿಕ್ಕಮಗಳೂರು : ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ASI ಕನಸು ಕಂಡಿದ್ದ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರೇಗೌಜ ಗ್ರಾಮದ ಬಳಿ ನಡೆದಿದೆ. ಸಿದ್ದರಾಮಪ್ಪ (50) ಮೃತ ದುರ್ಧೈವಿ. ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಅವರು ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ಮೂಲತಃ ಅಜ್ಜಂಪುರ ತಾಲ್ಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ ಅವರು 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಇಂದು ASI ಆಗಿ ಬಡ್ತಿ ಪಡೆಯಬೇಕಿತ್ತು. ಆದರೆ ನಿನ್ನೆ ರಾತ್ರಿ ಕರ್ತವ್ಯ ಮುಗಿಸಿಕೊಂಡು ಚಿಕ್ಕಮಗಳೂರಿನತ್ತ ತೆರೆಳುತ್ತಿದ್ದ ವೇಳೆ ತಮ್ಮ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿದ್ದರಾಮಪ್ಪ ಅವರು ಸ್ಥಳದಲ್ಲೆ ಮೃತಪಟ್ಟಿದ್ದು ಅವರ ASI ಆಗುವ ಕನಸು ಕನಸಾಗಿಯೇ ಉಳಿದು ಹೋಯಿತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಖರಾಯಪಟ್ಟಣ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.