ಉಡುಪಿ : ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈ ಬಗ್ಗೆ ಕಾನೂನು ಬಂದೇ ಬರುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ಧ ಕಾನೂನು ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ. ಅಲಹಾಬಾದ್ ಹೈಕೋರ್ಟ್ ಲವ್ ಜಿಹಾದ್ ವಿಚಾರದಲ್ಲಿ ಆದೇಶ ಕೊಟ್ಟಿದೆ. ಅಲ್ಲದೇ ಯು.ಪಿ, ಹರಿಯಾಣ, ಮಧ್ಯಪ್ರದೇಶ ಜಾರಿಗೆ ತರುವ ಚಿಂತನೆ ಮಾಡಿದೆ. ಅದರಂತೆ ಕರ್ನಾಟಕ ಸರ್ಕಾರ ಕೂಡಾ ಈ ಬಗ್ಗೆ ಚಿಂತನೆಯನ್ನು ನಡೆಸಿದೆ ಎಂದರು.
ಲವ್ ಜಿಹಾದ್ ಕಾನೂನು ಹೇಗೆ ಜಾರಿಗೆ ತರಬೇಕು ಯಾವ ಅಂಶಗಳನ್ನು ಸೇರಿಸಬೇಕು ಎಂಬುವುದು ಮುಖ್ಯ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಯುಪಿ ಸರ್ಕಾರ ಹೊರಡಿಸುವ ಅಧಿಸೂಚನೆಯ ಪ್ರತಿಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಹೇಳಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದನ್ನು ಒಪ್ಪಿದ್ದು, ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಇದನ್ನು ಘೋಷಣೆ ಮಾಡಿದ್ದಾರೆ.
ಲವ್ ಜಿಹಾದ್ ಕಾನೂನು ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಮೊಗಲು ಶಕೆಯಲ್ಲಿ ಬದುಕುತ್ತಿದ್ದಾರೆ. ಮುನ್ನೂರು ವರ್ಷದಿಂದ ಲವ್ ಜಿಹಾದ್ ಇದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇನ್ನೂ ಮೊಘಲ್ ಶಕೆಯಲ್ಲಿ ಇದ್ದಾರೆ ಎಂದು ಹೇಳಬಯಸುತ್ತೇನೆ ಎಂದರು.
ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ವಿಧಿಸುವ ಕುರಿತಂತೆ ಯಾವುದೇ ಚಿಂತನೆ ಮಾಡಿಲ್ಲ. ಜನ ಸೇರದಂತೆ ನೋಡಿಕೊಳ್ಳಬೇಕು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋವಿಡ್-19 ತಾಂತ್ರಿಕಾ ಸಲಹಾ ಸಮಿತಿ ಸೂಚಿಸಿದೆ. ರಾತ್ರಿ ಕರ್ಫ್ಯೂ ವಿಧಿಸದೆಯೂ ಈ ಬಗ್ಗೆ ಕ್ರಮ ಸಾಧ್ಯ. ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಹೊಸ ವರ್ಷಾಚರಣೆಯ ಸಂದರ್ಭ ಜನ ಸಂದಣಿ ಆಗದಂತೆ ನೋಡುವ ಜವಾಬ್ದಾರಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.










