ಚಿಕ್ಕಮಗಳೂರು: ನಗರದ ದಂಟಮಕ್ಕಿ ಬಡಾವಣೆಯ ಶ್ರೀ ಪ್ರಸನ್ನ ಶನೇಶ್ವರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ವೈಭವದಿಂದ ನಡೆಯಿತು.ಉತ್ಸವದ ಪ್ರಯುಕ್ತ ಗಣಪತಿ ಹೋಮ, ನವಗ್ರಹ ಹೋಮ ಜರುಗಿತು. ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನಡೆಯಿತು, ಮಹಾಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಅಡ್ಡಪಲ್ಲಕ್ಕಿ ಮತ್ತು ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ನಂತರ ಕಳಶ ಹೊತ್ತ ನೂರಾರು ಮಹಿಳೆಯರು, ನಾದಸ್ವರ, ಗ್ರಾಮೀಣ ವಾದ್ಯಗಳ ನಡುವೆ ಬ್ರಹ್ಮರಥೋತ್ಸವ ಮತ್ತು ಅಡ್ಡಪಲ್ಲಕ್ಕಿ ಉತ್ಸವವನ್ನು ಏಕಕಾಲದಲ್ಲಿ ನಡೆಸಲಾಯಿತು.
ದೇವಾಲಯದಿಂದ ಹೊರಟ ಬ್ರಹ್ಮ ರಥ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಬಡಾವಣೆಯ ಶ್ರೀ ಸಿದ್ದರಾಮೇಶ್ವರ ದೇವಾಲಯಕ್ಕೆ ತೆರಳಿ ಹಿಂತಿರುಗಿತು, ಮನೆಗಳ ಮುಂದೆ ರಂಗವಲ್ಲಿ ಹಾಕಿ ಉತ್ಸವವನ್ನು ಸ್ವಾಗತಿಸಿದ ಭಕ್ತರು ಆರತಿ ಎತ್ತಿ ಪೂಜೆ ಸಲ್ಲಿಸಿದರು.
ಉತ್ಸವ ದೇವಾಲಯಕ್ಕೆ ಹಿಂತಿರುಗಿದ ನಂತರ ಮಹಿಳೆಯರು ಹೊತ್ತು ತಂದಿದ್ದ 101 ಕಳಶಗಳಿಂದ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ಮಯೂರಿ ಗಾನಲಹರಿ ತಂಡದಿಂದ ಭಕ್ತಿ ಗೀತೆಗಳ ಗಾಯನ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಸದಸ್ಯ ರಾಜಶೇಖರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು.










