ಚಿಕ್ಕಮಗಳೂರು : ಮ್ಯಾರೇಜಸ್ ಆರ್ ಮೇಡ್ ಇನ್ ಹೆವಿನ್ ಅನ್ನೋದು ಅಕ್ಷರಶಃ ಸತ್ಯ ಅನ್ಸತ್ತೆ. ಎಲ್ಲಿಯದ್ದೋ ಹೆಣ್ಣು, ಮತ್ತೆಲ್ಲಿಯದ್ದೋ ಗಂಡು ಒಂದಾಗುವ ಸಮಯದಲ್ಲಿ ಎಲ್ಲಾ ಋಣಾನುಬಂಧ ಅಂತಾರೆ ದೊಡ್ಡವರು. ಆದ್ರೆ, ಈ ಮದುವೆ ಋಣಾನುಬಂಧದ್ದಲ್ಲ. ಬದಲಿಗೆ ಎತ್ತರದ ಸಂಬಂಧದದ್ದು. ಯಾಕಂದ್ರೆ, ಇಲ್ಲಿ ವರನೂ ಮೂರಡಿ. ವಧುವೂ ಮೂರಡಿ. ಇವರಿಬ್ಬರದ್ದು ಆದರ್ಶ ಜೋಡಿ. ಪೋಷಕರು ಎರಡು ವರ್ಷಗಳಿಂದ ವಧು-ವರರಿಗಾಗಿ ಹುಡುಕಾಟ ನಡೆಸ್ತಿದ್ರು ಸಿಗದ ಜೋಡಿ, ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ…
ಬೈಕ್ ಮೇಲೆ ಹೀರೋನಂತೆ ಬರ್ತಿರೋ ಈ ವರನ ಹೆಸರು ಪುನೀತ್. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ನಿವಾಸಿ. ಪದವಿ ಮುಗಿಸಿರೋ ಈತನಿಗೆ ಮನೆಯವ್ರು ಕಳೆದ ಎರಡು ವರ್ಷಗಳಿಂದ ವಧುವಿಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ, ಎಲ್ಲೂ ಸಿಕ್ಕಿರಲಿಲ್ಲ. ಹುಡುಕಿ-ಹುಡುಕಿ ಮನೆಯವ್ರೆ ಸೋತಿದ್ರು. ಆದ್ರೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರಕ್ಕೆ ಮದುವೆಗೆಂದು ಹೋದಾಗ ಕಣ್ಣಿಗೆ ಬಿದ್ದಿದ್ದೆ ಈ ಲಾವಣ್ಯ. ಈಕೆಯನ್ನ ನೋಡಿದ ಕೂಡಲೇ ನಮ್ಮ ಹುಡುಗನಿಗೆ ತಕ್ಕ ಜೋಡಿ ಎಂದು ಮನೆಯವ್ರು ಫಿಕ್ಸ್ ಆಗಿದ್ದಾರೆ. ಯಾಕಂದ್ರೆ, ಇಬ್ಬರೂ ಮೂರಡಿ. ಒಳ್ಳೆ ಜೋಡಿ ಎಂದು ಹುಡುಗಿ ಮನೆಯವ್ರಿಗೆ ಕೇಳಿದ್ದಾರೆ. ವರನನ್ನ ಹುಡುಕಿ-ಹುಡುಕಿ ರೋಸಿ ಹೋಗಿದ್ದ ವಧುವಿನ ಫೋಷಕರು ಕೂಡ ಹಸಿರು ನಿಶಾನೆ ತೋರಿದ್ದಾರೆ. ಎಲ್ಲರೂ ಕೂತು ಮಾತನಾಡಿದ ಮೇಲೆ ಇಂದು ಮೂರಡಿಯ ಪುನೀತ್ ಹಾಗೂ ಲಾವಣ್ಯ ಹೊಸಜೀವನಕ್ಕೆ ಅಡಿಇಟ್ಟಿದ್ದಾರೆ. ನವಜೀವನಕ್ಕೆ ಕಾಲಿಟ್ಟ ಪುನೀತ್ ಎರಡು ವರ್ಷದಿಂದ ಹುಡುಕ್ತಿದ್ವಿ, ಈಗ ವಧು ಸಿಕ್ಕಿದ್ದು ಖುಷಿ ಅಂತಾನೆ ವರ ಪುನೀತ್.
ಒಂದು ಗಂಡಿಗೆ ಒಂದು ಹೆಣ್ಣು ಇದ್ದೇ ಇರ್ತಾಳೆ ಎಂಬ ನಾಣ್ಣುಡಿ ಇದ್ರು, ಮದುವೆಯಾಗೋದಕ್ಕೆ ಋಣ ಇರ್ಬೇಕು. ಯಾಕಂದ್ರೆ, ಹಣ ಇಟ್ಕೊಂಡು ವರ್ಷಾನುಗಟ್ಟಲೇ ಹುಡುಕುದ್ರು ವಧು-ವರರೂ ಸಿಗೋದಿಲ್ಲ. ಪುನೀತ್‍ನ ಮೂರಡಿ ಹೀರೋಇನ್ ಲಾವಣ್ಯಾಳಿಗೂ ಮನೆಯವ್ರು ಎರಡು ವರ್ಷಗಳಿಂದ ಹುಡುಗನನ್ನ ಹುಡುಕ್ತಿದ್ರು. ಆದ್ರೆ, ಸಿಕ್ಕಿರಲಿಲ್ಲ. ಪದವಿ ಓದಿರೋ ಈಕೆಯೂ ನಾನೂ ಮೂರಡಿ ಇದ್ದೇನೆ, ಯಾರು ಮದುವೆಯಾಗ್ತಾರೆಂದು ಮದುವೆ ಆಸೆ ಬಿಟ್ಟಿದ್ಲು. ಆದ್ರೀಗ ಈಕೆಗೂ ಖುಷಿಯಾಗಿದೆ. ಆದ್ರೆ, ಆರಂಭದಲ್ಲಿ ಹುಡುಗಿ ಮನೆಯವ್ರಿಗೆ ಪುನೀತ್‍ಗೆ ಕೊಡಲು ಇಷ್ಟವರಲಿಲ್ಲವಂತೆ. ಯಾಕಂದ್ರೆ, ಇಬ್ಬರೂ ಕುಳ್ಳರೇ ಆದ್ರೆ, ಹೇಗೆ ಸಂಸಾರ ಮಾಡ್ತಾರೆ, ಮಗಳು ಹೇಗಿರ್ತಾಳೋ ಏನೋ ಭಯದಿಂದ ಮದುವೆಗೆ ಹಿಂದೇಟು ಹಾಕಿದ್ರು. ಆದ್ರೆ, ಹುಡುಗನೂ ಓದಿದ್ದಾನೆ, ಬುದ್ಧಿವಂತ, ವ್ಯವಹಾರಸ್ಥ, ಮನೆ ಕಡೆಯೂ ಚೆನ್ನಾಗಿದ್ದಾರೆಂದು ಎಲ್ಲರೂ ಮುಂದೆ ನಿಂತು ಮದುವೆ ಮಾಡಿ ಖುಷಿ ಪಟ್ರೆ, ಲಾವಣ್ಯ ಕೂಡ ಪುನೀತ್ ಮನದರಸಿಯಾಗಿ ಸಂತೋಷದಿಂದ್ಲು.
ಒಟ್ಟಾರೆ, ಜಗತ್ತಿನಲ್ಲಿ ದಿನಂಪ್ರತಿ ಲಕ್ಷಾಂತರ ಮದುವೆಯಾಗ್ತಾವೆ. ಎಲ್ಲವೂ ಸುದ್ದಿಯಾಗೋಲ್ಲ. ಆದ್ರೆ, ಮೂರಡಿ ವಧು-ವರರೂ ಹಸೆಮಣೆ ಏರೋ ಸುಸಂದರ್ಭ ಸುದ್ದಿಯಾಗಿದ್ದು, ನಮ್ಮ ಮದುವೆಯನ್ನ ಇಡೀ ರಾಜ್ಯವೇ ನೋಡುತ್ತೆಂದು ನವದಂಪತಿಗಳಿಗೂ ಖುಷಿಯಾಗಿದ್ದಾರೆ. ಅದೇನೆ ಇದ್ರು, ತಡವಾಗಿಯಾದ್ರು ನನಗೊಂದು ಸರಿಯಾದ ಜೋಡಿ ಸಿಕ್ತೆಂದು ಹೊಸಜೀವನಕ್ಕೆ ಅಡಿಇಟ್ಟ ಈ ನವದಂಪತಿಗಳಿಗೆ ನಾವು-ನೀವು ಶುಭಹಾರೈಸೋಣ.