ಅಲ್ವಾರ್/ಹೊಸದಿಲ್ಲಿ: ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಗೋರಕ್ಷಕರೆಂದು ಹೇಳಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಂದುಹಾಕಿದ ಘಟನೆ ರಾಜಸ್ಥಾನ-ಹರಿಯಾಣ ಗಡಿಯಲ್ಲಿ ನಡೆದಿದೆ. ನವೆಂಬರ್ 10ರಂದು ನಡೆದಿರುವ ಘಟನೆ ಕುರಿತು ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ಉಮ್ಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
ನ. 10ರಂದು ಉಮ್ಮರ್ ಮತ್ತು ಇಬ್ಬರು ಹರಿಯಾಣದ ಮೇವಾತ್ನಿಂದ ರಾಜಸ್ಥಾನದ ಭಾರತ್ಪುರಕ್ಕೆ ದನಗಳನ್ನು ಸಾಗಿಸುತ್ತಿದ್ದರು. ಮಾರ್ಗ ಮಧ್ಯೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಫಹಾರಿ ಗ್ರಾಮದ ಬಳಿ ಗೋರಕ್ಷಕರೆಂದು ಹೇಳಿಕೊಂಡು ಬಂದ ಗುಂಪೊಂದು ಹಲ್ಲೆ ನಡೆಸಿ, ಬಳಿಕ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದೆ. ದಾಳಿಕೋರರು ಗುಂಡೇಟಿನಿಂದ ಸತ್ತ ವ್ಯಕ್ತಿಯ ಮೃತದೇಹವನ್ನು ರೈಲು ಹಳಿಗೆ ಎಸೆದು ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಮೆಯೊ ಪಂಚಾಯತ್ ಅಧ್ಯಕ್ಷ ಶೇರ್ ಮುಹಮ್ಮದ್ ಆರೋಪಿಸಿದ್ದಾರೆ. ಉಮ್ಮರ್ ಜತೆಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರೂ ಅದನ್ನು ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷರು ದೂರರಿದ್ದಾರೆ.