ಚಿಕ್ಕಮಗಳೂರು : ನಾವೆಲ್ಲಾ ಪರಿಸರದ ಕೂಸುಗಳು, ನಮ್ಮ ಗಿರಿ ಪರ್ವತಗಳು ಸಾಕಷ್ಟು ಅಪರೂಪದ ಜೀವವೈವಿಧ್ಯತೆಯಿಂದ ಕೂಡಿದ್ದು ನದಿಮೂಲಗಳ ತಾಣವಾಗಿದೆ. ನಮ್ಮ ಈ ಪರಸರವನ್ನು ಸಂರಕ್ಷಿಸಿಕೊಳ್ಳಬೇಕಾದುದು ನಮ್ಮೆಲ್ಲರ ಹೊಣೆ ಎಂದು ಅಡವೆಂಚರ್ಸ್ ಕ್ಲಬ್ ಉಪಾಧ್ಯಕ್ಷ ಡಾ|| ವಿನಾಯಕ್ ತಿಳಿಸಿದರು. ಅವರು ಸ:ಪ:ಪೂ:ಕಾಲೇಜು, ಬೇಲೂರು ರಸ್ತೆಯ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪರಿಸರ ನಾವು ಮತ್ತು ನೀವು ಎಂಬ ವಿಷಯ ಕುರಿತು ಮಾತನಾಡುತ್ತಾ- ಮಾನವ ಸ್ವಾರ್ಥಿಯಾಗಿ ಪರಿಸರದ ಮೇಲೆ ಅತ್ಯಾಚಾರದ ದಾಳಿ ಮಾಡುತ್ತಾ ಮನಸ್ಸೋ ಇಚ್ಛೆ ಪ್ರಕೃತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ಇದರ ಪರಿಣಾಮವನ್ನು ಇಂದು ಜಗತ್ತು ಅನುಭವಿಸುತ್ತಿದೆ. ಒಂದು ಕಡೆ ಭೂ ತಾಪ, ಅಕಾಲಿಕ ಮಳೆ, ಪ್ರವಾಹ, ಬರಗಾಲ , ಎಲ್ಲಾ ರೀತಿಯ ಮಾಲಿನ್ಯ, ಕಸವಿಲೇವಾರಿ ಸಮಸ್ಯೆ ಇತ್ಯಾದಿ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಚಿಕ್ಕಮಗಳೂರಿನ ಪ್ರಕೃತಿ ಸೊಬಗಿಗೆ ಮನಸೋತು ಬರುತ್ತಿದ್ದು ನಮ್ಮ ಗಿರಿಶಿಖರಗಳನ್ನು ಪ್ಲಾಸ್ಟಿಕ್‍ಮಯ ಮಾಡುತ್ತಿದ್ದು ಅಲ್ಲಿನ ಸೌಂದರ್ಯಕ್ಕೆ ಮತ್ತು ಪರಿಸರಕ್ಕೆ ಬಹಳ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ಕರಗದ ವಸ್ತು ಇದು ಭೂಮಿಗೆ, ಜೀವಜಗತ್ತಿಗೆ ಕೆಟ್ಟಪರಿಣಾಮವನ್ನು ಬೀರುತ್ತಿದೆ. ಪ್ರತಿಯೊಬ್ಬರೂ ಜಾಗರೂಕರಾಗಬೇಕು ಪ್ರಜ್ಞಾವಂತರಾಗಿ ನಡೆದುಕೊಳ್ಳಬೇಕು. ಕಾನೂನು ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ನಮಗೆ ನಾವೇ ಕಾನೂನನ್ನು ಜಾರಿಗೆ ತಂದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರಕೃತಿ ತನ್ನ ಸಮತೋಲನವನ್ನು ತನ್ನದೇ ರೀತಿಯಲ್ಲಿ ಕಾಯ್ದುಕೊಳ್ಳಲು ಮುಂದಾಗುತ್ತದೆ ಆಗ ನಾವು ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ವಿದ್ಯಾರ್ಥಿಗಳು ಯುವಕರು ಆದ ನೀವು ಜಾಗೃತರಾಗಿ ಸಮಾಜವನ್ನು ಜಾಗೃತಗೊಳಿಸುವ ಅನಿವಾರ್ಯತೆ ಈ ವಿಷಯದಲ್ಲಿದೆ. ಅಂತಹ ಮನಸ್ಸನ್ನು ನಿಮ್ಮ ಎನ್.ಎಸ್.ಎಸ್. ಶಿಬಿರ ತುಂಬಿಕೊಡಿಲಿ ಪರಿಸರ ಕಾಳಜಿಯ ಡಿಂಡಿಮ ಎಲ್ಲೆಡೆ ಭಾರಿಸಲಿ ಎಂದು ತಿಳಿಸಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಸಿ.ಹೆಚ್.ನಾಗರಾಜ್ ಪರಿಸರ ಮಾಲಿನ್ಯತೆಯ ಗಂಭೀರತೆಯ ಬಗ್ಗೆ ಹಲವಾರು ನಿದರ್ಶನಗಳನ್ನು ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಗೌರವ ಅತಿಥಿಗಳಾಗಿ ಟಿ.ಸಿ.ಶಾಂತಪ್ಪ, ಮೀನಾಕ್ಷಿಬಾಯಿ. ಪ್ರಗತಿಯವರು ಭಾಗವಹಿಸಿದ್ದರು. ಶಿಬಿರಾರ್ಥಿಗಳಾದ ಕೃಪಾ ಸ್ವಾಗತಿಸಿ, ಹೇಮಂತ್ ವಂದಿಸಿದರು ಶ್ರೀ ಜಿ.ಎಂ.ಮಧು ಕಾರ್ಯಕ್ರಮವನ್ನು ನಿರೂಪಿಸಿದರು.