ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನ ಸಂಘಟಿತರಾಗಬೇಕು : ವೈಎಸ್ ವಿ ದತ್ತಾ

659

ಚಿಕ್ಕಮಗಳೂರು : ಜಾಗತೀಕರಣ ಮತ್ತು ಆಧುನೀಕರಣದಿಂದಾಗಿ ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಆ ಸಮುದಾಯದ ಜನ ಸಂಘಟಿತರಾಗಬೇಕು ಎಂದು ಕಡೂರು ಶಾಸಕ ವೈಎಸ್‍ವಿ ದತ್ತ ಸಲಹೆ ಮಾಡಿದರು. ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ನೂತನ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾಗತೀಕರಣ ಮತ್ತು ಆಧುನೀಕರಣದಿಂದಾಗಿ ಬದಲಾದ ಸನ್ನಿವೇಶದಲ್ಲಿ ಬ್ರಾಹ್ಮಣ ಸಮುದಾಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದ ಅವರು ಇದು ನಿಗಮ, ಮಂಡಳಿ ಸ್ಥಾಪಿಸುವುದರಿಂದ  ಪರಿಹಾರವಾಗುವುದಿಲ್ಲ, ಸಮಸ್ಯೆಗಳನ್ನು  ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಆ ಸಮಾಜದ ಜನ ಆತ್ಮಾವಲೋಕನ ಮಾಡಿಕೊಳ್ಳಬೇಕು, ಗಂಭೀರ ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಸಂಘದ ಅಭಿವೃದ್ದಿಗೆ 25 ಸಾವಿರ ರೂ ವೈಯಕ್ತಿಕ ದೇಣಿಗೆ ನೀಡಿದ ಅವರು ಸಮುದಾಯದ ಹಿತರಕ್ಷಣೆಗೆ ಸದಾ ತಾವು ಬದ್ದರಾಗಿರುವುದಾಗಿ ಭರವಸೆ ನೀಡಿದರು.

ನೋಟರಿ ಕೆ.ಎನ್.ನಾಗರಾಜ ರಾವ್ ಮಾತನಾಡಿ ಬ್ರಾಹ್ಮಣ ಸಮುದಾಯ ಅಭಿವೃದ್ದಿ ಹೊಂದಬೇಕಾದರೆ ಸಮಾಜದ ಜನ ರಾಜಕೀಯವಾಗಿ ಬೆಳೆಯಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಎ.ವಿ.ಅನಂತರಾಮಯ್ಯ ಬ್ರಾಹ್ಮಣ ಸಮುದಾಯದ ಏಳಿಗೆಗಾಗಿ ನೆರೆ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ವಿಪ್ರ ಕ್ಷೇಮಾಭಿವೃದ್ದಿ ನಿಗಮವನ್ನು ಸ್ಥಾಪಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವಂತೆ ಕಡೂರು ಶಾಸಕ ವೈಎಸ್‍ವಿ ದತ್ತ ಅವರಿಗೆ ಮನವಿ ಮಾಡಿದರು.

ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘ ವಿಪ್ರ ನೌಕರರ ಹಿತರಕ್ಷಣೆಗಷ್ಟೇ ಸೀಮಿತವಾಗದೆ ಸಮುದಾಯದ ಅಭಿವೃದ್ದಿಗೆ ದುಡಿಯುತ್ತಿದೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು, ನಿವೃತ್ತ ನೌಕರರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಶ್ರೀ ಬೋಳರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಡಿ.ಎಸ್.ರಾಮನಾಥಶಾಸ್ತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕರ್ನಾಟಕ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಸುಧಾಕರ್, ಸಂಘದ ಖಜಾಂಚಿ ಎ.ಎಸ್.ಶ್ರೀಧರ್ ಉಪಸ್ಥಿತರಿದ್ದರು. ಸುಮಾ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು, ಎಂ.ವಿ.ಪ್ರಕಾಶ್ ಸ್ವಾಗತಿಸಿದರು, ಎ.ಎಸ್.ಪ್ರಕಾಶ್ ವಂದಿಸಿದರು.