ಬೆಂಗಳೂರು : ರಾಜ್ಯದಲ್ಲಿ ಇಂಧನ ಇಲಾಖೆ ಇದೇ ಮೊದಲ ಬಾರಿಗೆ ಕಲ್ಲಿದ್ದಲು ತುರ್ತು ಪರಿಸ್ಥಿತಿ ಘೋಷಿಸಿದೆ. ಸಾಗಣೆ ಜಾಲದ ತೊಂದರೆಯಿಂದಾಗಿ ರಾಜ್ಯದಲ್ಲಿನ ಕಲ್ಲಿದ್ದಲು ದಾಸ್ತಾನು ಕರಗಿದೆ. ಪ್ರಸ್ತುತ ಕೇವಲ ಅರ್ಧ ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲಿನ ಸಂಗ್ರಹವಿದೆ. ಆದ್ದರಿಂದ ಯಾವುದೇ ವಿಧಾನದಲ್ಲೂ ಕಲ್ಲಿದ್ದಲು ಸಾಗಾಣಿಕೆಗೆ ಸರಕಾರ ಅವಕಾಶ ಕಲ್ಪಿಸಿದೆ.
ಈ ಬಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸುದ್ದಿಗಾರರೊಂದಿ ಮಾತನಾಡಿ, ಕಲ್ಲಿದ್ದಲು ಕೊರತೆಯಿಂದ ರಾಜ್ಯದ ವಿದ್ಯುತ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಮಳೆಗಾಲದ ಬಳಿಕ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ಕಲ್ಲಿದ್ದಲು ಸಾಗಾಣಿಕೆಯನ್ನ ಯಾವುದೇ ವಿಧಾನದಲ್ಲೂ ಪಾರದರ್ಶಕ ಕಾಯಿದೆಯಿಂದ ವಿನಾಯಿತಿ ಪಡೆಯಲು ಈ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಾಗಾಣೆ ಲಿಂಕೇಜ್ ಸಮಸ್ಯೆ ಹಾಗೂ ಕೋಲ್ ಬ್ಲಾಕ್ ವಿವಾದ ಇತ್ಯರ್ಥವಾಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗದಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಕೇಂದ್ರ ಸಚಿವರನ್ನ ಭೇಟಿ ಮಾಡಿ ಇತರೇ ಮಾರ್ಗದಲ್ಲಿ ಕಲ್ಲಿದ್ದಲನ್ನ ಪೂರೈಸೋದಕ್ಕೆ ಒತ್ತಡ ಹೇರಿದ್ದೇವೆ ಎಂದಿದ್ದಾರೆ. ರಸ್ತೆ ಹಾಗೂ ರೈಲು ಎರಡೂ ಮಾರ್ಗದಲ್ಲೂ ಕಲ್ಲಿದ್ದಲನ್ನ ತರಿಸಿಕೊಳ್ಳಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.