ಅನ್ನ ಕೊಡುವ ರೈತನನ್ನು ಮರೆಯಬಾರದು- ಡಾ// ಜೆ.ಪಿ.ಕೃಷ್ಣೇಗೌಡ…

491
firstsuddi

ಚಿಕ್ಕಮಗಳೂರು: ಸಮಯ ಪ್ರಜ್ಞೆ , ರಾಷ್ಟ್ರಪ್ರಜ್ಞೆ,ಕರ್ತವ್ಯ ಪ್ರಜ್ಞೆಗಳನ್ನು ವಿದ್ಯಾರ್ಥಿ ಹಂತದಲ್ಲೇ ನಾವು ಬೆಳೆಸಿಕೊಳ್ಳಬೇಕು.ವಿದ್ಯೆಯನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ಸಾಧ್ಯವಿಲ್ಲ.ಅದನ್ನು ಸಾಧನೆಯ ಮೂಲಕವೇ ಗಳಿಸಬೇಕು ಎಂದು ಖ್ಯಾತ ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ತಿಳಿಸಿದರು. ಅವರು ಕಳಸಾಪುರದ ಸ.ಪ.ಪೂ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಸಂಘ ಹಾಗೂ ಕಿಟಕಿ ಸಿನೆಮಾ ಕ್ಲಬ್ ಉದ್ಘಾಟಿಸಿ ಮಾತನಾಡಿದರು.ಮನುಷ್ಯನಿಗೆ ವಿದ್ಯೆ ಕಲಿತಾಗ ಸಂಸ್ಕಾರ ಪ್ರಾಪ್ತಿಯಾಗುತ್ತದೆ.ವಿದ್ಯೆ ಶಾಶ್ವತವಾದ ಆಸ್ತಿಯಾಗಿ ಜ್ಞಾನಿಯನ್ನು ಕಾಪಾಡುತ್ತದೆ.ಅದನ್ನು ಸುಡಲು,ಮಾರಲು,ಕಳ್ಳತನ ಮಾಡಲು ಯಾರಿಗೂ ಸಾಧ್ಯವಿಲ್ಲ.ವಿದ್ಯಾರ್ಥಿ ಗಳು ದಿನಪತ್ರಿಕೆ ಓದಬೇಕು,ರೇಡಿಯೋ ಕೇಳಬೇಕು ಹಾಗೇ ಎಷ್ಟು ಬೇಕೋ ಅಷ್ಟೇ ಟಿ.ವಿ.ಮೊಬೈಲ್ ಬಳಸಬೇಕು.ನಾವು ಓದಿ ಏನೇ ಆಗಬಹುದು.ಎಲ್ಲೇ ಇದ್ದರೂ ಅನ್ನ ಕೊಡುವ ರೈತನನ್ನು ಮರೆಯಬಾರದು.ರೈತ ಜಗತ್ತಿನ ಆದ್ಯಗುರು.ಮಳೆ ಜಾಸ್ತಿಯಾಗಲು,ಕಡಿಮೆಯಾಗಲು ಕಷ್ಟ ಅನುಭವಿಸುವವನು ರೈತ.ಅಲ್ಪ ಮಾನವನಾದವನು ವಿದ್ಯೆಯಿಂದ ವಿಶ್ವ ಮಾನವನಾಗಬೇಕು.ಆಗ ಜಗತ್ತನ್ನು ಗೌರವಿಸುವ ಗುಣ ಬರುತ್ತದೆ.ಪ್ರತಿ ವ್ಯಕ್ತಿಯಲ್ಲೂ ಶಕ್ತಿ ಇರುತ್ತದೆ.ಅದನ್ನು ಗುರುತಿಸಿ ಗೌರವಿಸುವವನೇ ನಿಜ ವಿದ್ಯಾವಂತ ” ಎಂದು ಅವರು ತಿಳಿಸಿದರು.
ಸಿ.ಬಿ.ಸಿ.ಕಾರ್ಯಾಧ್ಯಕ್ಷ ದಿನೇಶ್ ಮಾತನಾಡಿ ತಾತ್ಕಾಲಿಕವಾದ ಭಾವಗಳಿಗೆ ಬಲಿಯಾಗದೇ ಶಾಶ್ವತವಾದ ಸ್ಥಾನ ನೀಡುವ ವಿದ್ಯೆಯೇ ಶ್ರೇಷ್ಠ ವಾದುದು ಎಂದರು.ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್  ಅಹಂಕಾರವನ್ನು ಕಳೆದುಕೊಂಡು ಜ್ಞಾನವಂತರಾಗಬೇಕು.ಆದರ್ಶ ವ್ಯಕ್ತಿಗಳು ಡಾ.ಜೆ.ಪಿ.ಕೃಷ್ಣರಂತೆ ನಮ್ಮ ನಡುವೆ ಮೌನ ಸಾಧನೆ ಮಾಡುತ್ತಿರುತ್ತಾರೆ.ನಾವು ಟೊಳ್ಳುಗಳಾಗದೆ ಗಟ್ಟಿಯಾಗಬೇಕು” ಎಂದರು.ಸಿ.ಬಿ.ಸಿ ಸದಸ್ಯರಾದ ಸಿದ್ಧೇಗೌಡ,ಲೋಕೇಶ್,ರುದ್ರೇಶ್,ಭಾಗ್ಯಜ್ಯೋತಿ,ಧನಲಕ್ಷ್ಮಿ,ಉಪನ್ಯಾಸಕರಾದ ಧರ್ಮೇಂದ್ರ,ಲವ,ಕವಿತ, ಸರಿತ,ಸುಂಧಕುಮಾರ್ ಉಪಸ್ಥಿತರಿದ್ದರು. .ಕಾಲೇಜು ವಿದ್ಯಾರ್ಥಿ ನಿಯರು ಪ್ರಾರ್ಥಿಸಿದರು.ಡಾ.ಎಂಡಿ ಸುದರ್ಶನ್ ಸ್ವಾಗತಿಸಿದರು.ಜಿ.ಬಿ.ಸುಕನ್ಯ ನಿರೂಪಿಸಿದರು.ಶಾಂತಕುಮಾರ್ ವಂದಿಸಿದರು.