ಹಳೇ ಗಾಡಿಗೆ ಸುಣ್ಣ ಬಣ್ಣ ಬಳಿದು ಆಯುಧ ಪೂಜೆ ಮಾಡಿದಂತಹ ಬಜೆಟನ್ನು ಕೇಂದ್ರ ಮಂಡಿಸಿದೆ: ಡಾ.ಜಿ ಪರಮೇಶ್ವರ್…

286
firstsuddi

ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಪ್ರಸ್ತುತ ಮಂಡಿಸಿರುವ 2019-20ರ ಕೇಂದ್ರದ ಮಧ್ಯಂತರ ಬಜೆಟ್, ರೈತ ವಿರೋಧಿ, ಯುವಜನ ವಿರೋಧಿ ಬಜೆಟ್‌ ಆಗಿದೆ. ಸಾಲಮನ್ನಾ ಮಾಡುವ ನಿರೀಕ್ಷೆಯನ್ನು ಈ ಬಜೆಟ್ ಹುಸಿ ಮಾಡಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುವಂತಿದೆ. ಈ ಬಜೆಟ್‌ ನಿರೀಕ್ಷೆಯ ಮಟ್ಟ ತಲುಪಿಲ್ಲ.

ಕರ್ನಾಟಕ ಸರಕಾರ ಸಾಲಮನ್ನಾ ಮಾಡಿದ್ದ ವೇಳೆ ರೈತರಿಗೆ “ಲಾಲಿಪಾಪ್” ನೀಡಿದ್ದಾರೆ ಎಂದು ಪ್ರಧಾನಿ ಮೋದಿಯೇ ಟೀಕಿಸಿದ್ದರು. ಈಗ ಅವರ ಬಜೆಟ್‌ನಲ್ಲಿ ರೈತರಿಗೆ ಕನಿಷ್ಠ ಲಾಲಿಪಾಪನ್ನೂ ನೀಡಲಾಗಿಲ್ಲ.ರೈತರಿಗೆ ಅಂಗೈಯಲ್ಲೇ ಆಕಾಶ ತೋರಿಸುವ ಜಾದೂವನ್ನು ಕೇಂದ್ರ ಸರಕಾರ ಮಾಡಿದೆ.

ಹಳೇ ಗಾಡಿಗೆ ಸುಣ್ಣ ಬಣ್ಣ ಬಳಿದು ಆಯುಧ ಪೂಜೆ ಮಾಡಿದಂತಹ ಬಜೆಟನ್ನು ಕೇಂದ್ರ ಮಂಡಿಸಿದೆ. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಕೆಲ‌ವು ಯೋಜನೆಗಳನ್ನು ನೀಡಿದೆ ಹೊರತು, ಜನಸಾಮಾನ್ಯರು ಒಪ್ಪುವ ಯಾವ ಯೋಜನೆಯನ್ನೂ ನೀಡಿಲ್ಲ. ಸಾಲಮನ್ನದ ವಿಚಾರದಲ್ಲಿ ಕೇಂದ್ರ ಕರ್ನಾಟಕ ಸರ್ಕಾರವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕಿದೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.