• ಅನಿಲ್‍ಮೊಂತೆರೊ,ಕೊಟ್ಟಿಗೆಹಾರ.
ಹೇಮಾವತಿ ನದಿಯ ಹೆಸರು ಪ್ರತಿಯೋರ್ವರಿಗೂ ಗೊತ್ತಿದೆ.ಈ ನದಿಯಿಂದ ಹಲವು ರೈತರು ನೀರಿನ ಆಶ್ರಯ ಪಡೆದು ಕೃಷಿ ನಡೆಸುತ್ತಿದ್ದಾರೆ.ಆದರೆ ಬಹುತೇಕ ಮಂದಿಗೆ ಹೇಮಾವತಿ ಹುಟ್ಟುವ ನದಿ ಮೂಲ ಗೊತ್ತಿಲ್ಲ.! ಸ್ಥಳೀಯರಿಗೆ ಮಾತ್ರ ಈ ನದಿ ಮೂಲದ ಜೊತೆಗೆ ಶ್ರೀಮಹಾಗಣಪತಿಯ ಕೃಪೆಯ ಮಹತ್ವವೂ ಗೊತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯ ಬೆಟ್ಟದಲ್ಲಿ ಹಸಿರ ರಮ್ಯ ತಾಣದ ನಡುವೆ ಹೇಮಾವತಿ ನದಿ ಹುಟ್ಟುತ್ತದೆ. ನೀರು ಜಿನುಗುತ್ತಾ ಸಾಗಿ ಕೆರೆಯಲ್ಲಿ ಆಶ್ರಯ ಪಡೆದು ಮುಂದೆ ನದಿಯಾಗಿ ಸಾಗುವುದೇ ಹೇಮಾವತಿಯ ವೈಶಿಷ್ಟ್ಯ.ಈ ನದಿಮೂಲದ ಸನಿಹ ವಿಘ್ನ ನಿವಾರಕನ ಆಸ್ಥಾನದ ದೇಗುಲವಿದೆ.ಅದುವೇ ಶ್ರೀ ಮಹಾಗಣಪತಿ ದೇವಸ್ಥಾನ.ಪ್ರತಿವರ್ಷವೂ ಇಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಸಾಗುತ್ತದೆ.ಜಾತ್ರೆ ನಡೆಯಬೇಕಾದರೆ ಸ್ಥಳೀಯ ದೇವಸ್ಥಾನದ ಆಡಳಿತ ಸಮಿತಿ ಈ ಉತ್ಸವಕ್ಕೆ ತಯಾರಿ ನಡೆಸುತ್ತಿದೆ.ಇನ್ನೇನು ಕೆಲವೇ ದಿನದಲ್ಲಿ ಹೇಮಾವತಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.ಸರ್ವ ಪ್ರವಾಸಿಗರಿಗೂ ಇಲ್ಲಿಯ ಆಡಳಿತ ಮಂಡಳಿ ಜಾತ್ರಾ ಮಹೋತ್ಸವಕ್ಕೆ ಕೈಬೀಸಿ ಕರೆಯುತ್ತಿದೆ.
ಕಳೆದ ವರ್ಷ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಚೇತನ ಎಂ.ಎಲ್.ಗುರ್ಜರ್ ನೇತೃತ್ವದಲ್ಲಿ ಜಾತ್ರೆ ಅದ್ದೂರಿಯಾಗಿ ನಡೆದಿತ್ತು.ಆದರೆ ಈ ಬಾರಿ ಮಾದವ ಎಲ್.ಗುರ್ಜರ್ ಬರೀ ನೆನಪಾಗಿ ಉಳಿದಿದ್ದು ಅವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಎ.ಗುರ್ಜರ್ ಹಾಗೂ ಉಪಾಧ್ಯಕ್ಷರಾಗಿ ಯಶವಂತ್ ಗುರ್ಜರ್ ಕೈಜೋಡಿಸಿದ್ದು ಪಲ್ಲಕ್ಕಿ ಉತ್ಸವವನ್ನು ಆಡಳಿತ ಮಂಡಳಿಯ ಸದಸ್ಯರ ಜೊತೆ ಅದ್ದೂರಿಯಾಗಿ ನಡೆಸಲು ಸನ್ನಧ್ದರಾಗಿದ್ದಾರೆ.
ನದಿ ಮೂಲದ ಇತಿಹಾಸ

ಹೇಮಾವತಿ ನದಿಯ ಇತಿಹಾಸದ ಪುರಾಣದ ಮಜಲುಗಳಲ್ಲಿ ಸತ್ಯಕಾಮನೆಂಬ ಹುಡುಗನು ಜ್ಞಾನಿಯಾದ ಗೌತಮ ಮಹರ್ಷಿ ಅವರ ಬಳಿಗೆ ಹೋಗಿ ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ವಿನಂತಿಸಿದರಂತೆ, ಗೌತಮ ಮಹರ್ಷಿಯು ಆತನ ಗೋತ್ರವನ್ನು ವಿಚಾರಿಸಿದಾಗ ಅವನಿಗೆ ಅದು ತಿಳಿಯದೇ ಇದ್ದುದ್ದರಿಂದ ಆತನ ತಾಯಿ ಜಾವಾಲಿ ಬಳಿ ವಿಚಾರಿಸಲು ಸಾಗುತ್ತಾನೆ.ತಾಯಿಗೂ ಕೂಡ ತಿಳಿಯದೇ ಇದ್ದುದ್ದರಿಂದ ಗೌತಮ ಮಹರ್ಷಿಗೆ ತನಗೂ ತನ್ನ ತಾಯಿಗೂ ಈ ಬಗ್ಗೆ ತಿಳಿದಿಲ್ಲವೆಂದಾಗ,ಮಹರ್ಷಿಯು ಸತ್ಯಕಾಮನ ಪೂರ್ವಾಪರ ಮೊದಲೇ ತಿಳಿದುಕೊಂಡು ಸತ್ಯಕಾಮನನ್ನು ಬ್ರಾಹ್ಮಣನನ್ನಾಗಿ ಸ್ವೀಕರಿಸುತ್ತಾರೆ.ಗೌತಮ ಮಹರ್ಷಿಯು ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ 300 ಗೋವುಗಳನ್ನು ನೀಡಿ ಇವುಗಳ ಸಂಖ್ಯೆ ಸಾವಿರ ಆಗುವವರೆಗೆ ನೋಡಿಕೊಳ್ಳಲು ಅಜ್ಞಾಪಿಸುತ್ತಾರೆ.ಸತ್ಯಕಾಮ ಗುರು ಕೊಟ್ಟ ಹಸುಗಳೊಂದಿಗೆ ತಪಸ್ಸಿಗೆ ತೆರಳುತ್ತಾನೆ.ಹಾಗೇ ತಪಸ್ಸಿಗೆ ಕುಳಿತ ಬೆಟ್ಟವೇ ಜಾವಳಿ ಸಮೀಪದ ಹೇಮಾವತಿ ಬೆಟ್ಟ.ಆತನು ಸ್ಥಾಪಿಸಿದ ಆಶ್ರಮದ ವಾತಾವರಣದಲ್ಲಿ ನೀರಿಲ್ಲ ಎಂದು ಗಮನಕ್ಕೆ ಬಂದ ಸತ್ಯ ಕಾಮನಿಗೆ ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿದ್ದರಿಂದ ದೇವಿ ಪಾರ್ವತಿಯು ಪ್ರತ್ಯಕ್ಷವಾದಾಗ ಸತ್ಯಕಾಮನು ಹಸುಗಳಿಗೆ ಕುಡಿಯಲು ನೀರಿಲ್ಲ ಎಂದು ಉತ್ತರಿಸುತ್ತಾನೆ.ದಟ್ಟವಾದ ಅರಣ್ಯದ ನಡುವೆ ಹಿಮ ಮತ್ತು ಮಂಜುಗೆಡ್ಡೆ ಪ್ರತ್ಯಕ್ಷವಾದವು.ಹಿಮ ನೀರಾಗಿ ಹರಿದು ಒಣ ಭೂಮಿ ಫಲವತ್ತತೆಯಾಗಲಿ ಎಂದು ಅಜ್ಷಾಪಿಸಿದರು.ಆಗ ಹಿಮ ನೀರಾಗಿ ಕರಗಿ ಹಿಮವಾಹಿನಿಯಾಯಿತು.ಸತ್ಯಕಾಮ ಸ್ಥಾಪಿಸಿದ ಆಶ್ರಮ ಜಾವಾಲಿ ಎಂದಾಯಿತು.ಕಾಲಕ್ರಮೇಣ ಜಾವಳಿ ಎಂದು ಕರೆದರು.ಹರಿದ ಹಿಮಾವಹಿನಿಯು ನೀರಾಗಿ ಕ್ರಮೇಣ ಹೇಮಾವತಿಯಾಗಿ ಹರಿದು ಸಕಲೇಶಪುರ ತಾಲೂಕು ಸಂಪಧ್ಬರಿತವಾಯಿತು ಎಂದು ಪುರಾಣದ ನಂಟಿನ ಚುಟುಕಾದ ತಾತ್ಪರ್ಯವಾಗಿದೆ.
ನದಿಮೂಲದಲ್ಲಿ ಗಣಪತಿಯ ಉತ್ಸವಕ್ಕೆ ಭರ್ಜರಿಯ ಸಿದ್ದತೆ

ಜಾವಳಿಯ ಹೇಮಾವತಿಯಲ್ಲಿ ಗಣಪತಿಯ ಮಹಾ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಪ್ರತಿವರ್ಷವೂ ನಡೆಯುತ್ತಿದೆ.ಸಾರ್ವಜನಿಕರ ಗ್ರಾಮಸ್ಥರ ಸಹಕಾರ,ಊರಿನ ಪ್ರಮುಖರ ಸಾರಥ್ಯದಿಂದ ಫಲ್ಲಕ್ಕಿ ಉತ್ಸವ,ಗಣಹೋಮ,ವಿಶೇಷ ಪೂಜೆ ನೆರವೇರುತ್ತದೆ.ಪೆಬ್ರವರಿ 9 ರಂದು ಬೆಳಿಗ್ಗೆ ಎಂಟು ಗಂಟೆಗೆ ಶ್ರೀ ಮಹಾಗಣಪತಿ ಸನ್ನಿದಿಯಲ್ಲಿ ಅನ್ನಸಂತರ್ಪಣೆಯೂ ನಡೆಯುತ್ತದೆ.ಭಕ್ತಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಫಲ್ಲಕ್ಕಿ ಉತ್ಸವಕ್ಕೆ ಕಳೆ ತರುತ್ತಾರೆ.ಭಕ್ತರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗುತ್ತಾರೆ.
ದೇವಸ್ಥಾನಕ್ಕೆ ಸಾಗಲು ದಾರಿ
ಹೇಮಾವತಿ ನದಿ ಮೂಲ ಹಾಗೂ ಮಹಾಗಣಪತಿ ದೇವಸ್ಥಾನವು ಬಾಳೂರಿನಿಂದ 3 ಕಿ.ಮೀ ಅಂತರದಲ್ಲಿದೆ.ಮೂಡಿಗೆರೆ ಭಾಗದಿಂದ ಸಾಗುವ ಭಕ್ತರು ಕೊಟ್ಟಿಗೆಹಾರದಿಂದ ಕಳಸ ರಸ್ತೆಯಲ್ಲಿ 9 ಕಿ.ಮೀ ಕ್ರಮಿಸಿದರೆ ಜಾವಳಿ ಗ್ರಾ.ಪಂ.ಕಚೇರಿ ಸಮೀಪದ ರಸ್ತೆಯಿಂದ ದೇವಸ್ಥಾನದ ಸನ್ನಿದ್ದಿಗೆ ತಲುಪಬಹುದು.ಹೊರನಾಡು ದೇವಸ್ಥಾನಕ್ಕೆ ಹೋಗುವ ಪ್ರಯಾಣಿಕರಿಗೆ ಜಾವಳಿ ಎಂಬ ಊರಿನಿಂದಲೇ ಸಾಗಬೇಕು.ಜಾವಳಿಯಿಂದ ಆಟೋ ವಾಹನದ ಸೌಲಭ್ಯವಿದೆ.ಬಾಳೂರಿನಿಂದಲೂ ದೇವಸ್ಥಾನಕ್ಕೆ ಆಟೋ ವ್ಯವಸ್ಥೆಯಿದೆ.ಈ ದೇವಸ್ಥಾನದಲ್ಲಿ ಅರ್ಚಕರಾದ ಚರಣ್ ಕಾರಂತ್ ಎಂಬ ಅರ್ಚಕರು ವಾಸ್ತವ್ಯ ಹೂಡಿದ್ದು ಭಕ್ತರಿಗೆ ವಿಶೇಷ ಪೂಜೆ ಸಲ್ಲಿಸಲು ನೆರವಾಗುತ್ತಾರೆ.ಅವರ ಸಂಪರ್ಕ ಸಂಖ್ಯೆ 9480211094/8105621641 ಸಂಪರ್ಕಿಸಬಹುದು.
“ಪ್ರತಿವರ್ಷವೂ ಹೇಮಾವತಿ ನದಿಮೂಲದ ವಿಶೇಷ ಜಾತ್ರೆ ನಡೆಯುತ್ತದೆ.ಅದ್ದೂರಿಯ ಪಲ್ಲಕ್ಕಿ ಉತ್ಸವವೂ ನಡೆಯುತ್ತದೆ.ಪ್ರತಿವರ್ಷವು ಈ ಜಾತ್ರೆಯಲ್ಲಿ ಪಾಲ್ಗೊಂಡು ಗಣಪತಿಯ ಕೃಪೆಯಿಂದ ಪ್ರಸನ್ನತೆ ಹೊಂದಿದ್ದೇನೆ.ಈ ಬಾರಿ ಪ್ರತಿವರ್ಷವೂ ಪೂಜೆಯ ಸಾರಥ್ಯ ನಡೆಸುತ್ತಿದ್ದ ಮಾದವ ಗುರ್ಜರ್ ಈ ಬಾರಿ ಇಲ್ಲ ಎಂಬುದು ವ್ಯಥೆಯಾದರೂ ಅವರ ಸ್ಥಾನವನ್ನು ಪ್ರವೀಣ್ ಎ.ಗುರ್ಜರ್ ಹಾಗೂ ಯಶವಂತ್ ಆರ್.ಗುರ್ಜರ್ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಈ ಬಾರಿಯೂ ಅಚ್ಚಕಟ್ಟಾಗಿ ಉತ್ಸವ ನಡೆಸಲು ಕೈಜೋಡಿಸಿದ್ದಾರೆ.ಈ ಐತಿಹಾಸಿಕ ತಾಣಕ್ಕೆ ಸ್ಥಳೀಯರು ಮಾತ್ರವಲ್ಲದೇ ಪ್ರವಾಸಿಗರು ಸೇರುವುದು ಉತ್ಸವಕ್ಕೆ ರಂಗು ತರುತ್ತದೆ..”
ಪರೀಕ್ಷಿತ್‍ಜಾವಳಿ,ವಕೀಲರು.










