ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಪ್ರಾಯೋಗಿಕ ನೆಲಗಟ್ಟಿನಲ್ಲಿ ಬಹು ಸಂಖ್ಯಾತ ಕೃಷಿಕ ಸಮುದಾಯಕ್ಕೆ ನಿರಾಸೆ ತಂದಿದೆ ಎಂದು ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
2 ಹೆಕ್ಟರ್ ಅಥವಾ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಮಾತ್ರ ವಾರ್ಷಿಕ 6000 ರೂ. ಅವರ ಖಾತೆಗೆ ಜಮಾ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯ ಲಾಭ 10 ಕೋಟಿಯಷ್ಟು ರೈತರಿಗೆ ದೊರಕ ಬಹುದು. ಆದರೆ, ಬರದಿಂದ ಸಂಕಷ್ಟದಲ್ಲಿರುವ ಬಯಲು ಹಾಗೂ ವಿವಿಧ ಪ್ರದೇಶಗಳ ರೈತರು ಬೆಳೆ ಮತ್ತು ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿ ಆರ್ಥಿಕ ಸಮಸ್ಯೆಗೆ ಸಿಕ್ಕಿರುವಾಗ ಈ ಯೋಜನೆಯ ಲಾಭ ಎಲ್ಲಾ ರೈತರಿಗೂ ದೊರಕುವಂತೆ ಮಾಡ ಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯ ಜನರಿಗೆ ಅನ್ವಯಿಸುವ ಗೃಹ ಸಾಲದ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂ. ಗೆ ಮಿತಿಗೊಳಿಸಿರುವುದು ಸಾಮಾನ್ಯ ವರ್ಗದ ಜನರಿಗೆ ನಿರಾಸೆ ತಂದಿದ್ದು, ಈ ಮಿತಿಯನ್ನು ಮತ್ತಷ್ಟು ಹೆಚ್ಚಿಸ ಬೇಕಿತ್ತು. ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.6.1ರಷ್ಟಿದ್ದು ಇದು ಕಳೆದ 45 ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ ಸಮಸ್ಯೆಯ ದಿನಗಳಾಗಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಬಜೆಟ್‍ನಲ್ಲಿ ವಿತ್ತ ಸಚಿವರು ಯಾವುದೇ ಸೃಜನಾತ್ಮಕ ಘೋಷಣೆಗಳು ಮಾಡಿಲ್ಲ. ಉದ್ಯೋಗ ಸೃಷ್ಠಿಯ ವಿಚಾರದಲ್ಲಿ ಕೇಂದ್ರ ಸರ್ಕಾರಿ ಹಿಂದಿನಿಂದಲೂ ಎಡವಿದೆ. ಈ ಬಾರಿಯೂ ಮೂಲಭೂತ ಸಮಸ್ಯೆಯಾದ ನಿರುದ್ಯೋಗ ಸಮಸ್ಯೆ ನಿವಾರಿಸಿ ಉದ್ಯೋಗ ಸೃಷ್ಟಿಗೆ ಏನೂ ಮಾಡಿಲ್ಲ. ಜನಪ್ರಿಯತೆಗಾಗಿ ನಡೆಸಿರುವ ಬರೀ ಬರಪೂರ ಘೋಷಣೆಗಳ ಅನಿವಾರ್ಯತೆಯ ಒತ್ತಡಕ್ಕೆ ಸಿಲುಕಿ ಕೇಂದ್ರ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿ ನೈಜ ಸಮಸ್ಯೆಗಳನ್ನು ಮುಚ್ಚಿಡಲು ಯತ್ನಿಸಿದೆ. ನೋಟು ರದ್ದತಿಯಿಂದ ದೇಶದ ಜನರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳೂ ಬದುಕು ಕಳೆದುಕೊಂಡಿದ್ದರು ಅವರನ್ನು ಚೇತರಿಕೆಯತ್ತ ಕೈಹಿಡಿಯಲು ಬಜೆಟ್ ವಿಫಲವಾಗಿದೆ. ಒಟ್ಟಾರೆ ಇದೊಂದು ಅಳಿವು ಉಳಿವಿನ ಬಜೆಟ್ ಆಗಿದೆ. ಜನರ ಶಾಶ್ವತ ಸಂಕಷ್ಟಗಳನ್ನು ದೂರ ಮಾಡಲು ಬಜೆಟ್‍ನಲ್ಲಿ ಯಾವುದೇ ಪ್ರಯತ್ನ ಮಾಡದೇ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್‍ನಲ್ಲಿ ಇಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುವಂತಿದೆ. ಈ ಬಜೆಟ್ ಜನರ ನಿರೀಕ್ಷೆಯ ಮಟ್ಟ ತಲುಪಿಲ್ಲ.
ಒಂದಿಷ್ಟು ಚುನಾವಣಾ ಪ್ರಚಾರದ ಘೋಷಣೆಗಳನ್ನು ಮಾತ್ರ ಮಾಡಲಾಗಿದೆ. ಪ್ರಧಾನಿ ಮೋದಿಯವರು ಘೋಷಣೆ ಮಾಡಿರುವ ಹಲವು ಯೋಜನೆಗಳು ನಿಜ ಸ್ಥಿತಿಗೆ ಅತ್ಯಂತ ದೂರವಾಗಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಲು ದೇಶದ ಜನತೆಯನ್ನು ದೂಡಿದಂತೆ ಆಗದಿರಲಿ ಎಂದು ಧರ್ಮೇಗೌಡರವರು ಪತ್ರಿಕಾ ಹೇಳಿಕೆಯಲ್ಲಿ ಆಶಿಸಿದ್ದಾರೆ.










