ಚಿಕ್ಕಮಗಳೂರು : ಜಿಲ್ಲೆಯ ಲಾಲ್‍ಭಾಗ್ ಎಸ್ಟೇಟ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ಈ ಹಿಂದಿನ ದಾಖಲೆಯನ್ನು ಮುರಿಯುವ ಮೂಲಕ ವಿಶ್ವದ ನಾಲ್ಕನೇ ಶ್ರೇಯಾಂಕದ ಓಟಗಾರ ಯು.ಕೆ ಯ ಪೌಲ್ ಗಿಬ್ಲ್ರಿನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ನಡೆದ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ಸ್ಪರ್ಧಾಳುಗಳು ಮಾರನೇ ದಿನ ಬೆಳಿಗ್ಗೆ ವೇಳೆಗೆ ಗುರಿ ತಲುಪುವ ನಿರೀಕ್ಷೆ ಹೊಂದಲಾಗಿತ್ತು, ಆದರೆ ಬೆಂಗಳೂರಿನ ಆತ್ರೇಯ ಅವರು ಹಿಂದಿನ ದಿನ ರಾತ್ರಿ 7.45ಕ್ಕೆ ಗುರಿ ಮುಟ್ಟುವ ಮೂಲಕ ಕೇವಲ 13 ಗಂಟೆ 55 ನಿಮಿಷಗಳಲ್ಲಿ ಅಂತರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದ್ದರು.
ಶನಿವಾರ ನಡೆದ ಸ್ಪರ್ಧೆಯಲ್ಲಿ ಆರಂಭದಿಂದಲೇ ಮುನ್ನಡೆ ಸಾಧಿಸಿದ್ದ ಯು.ಕೆ ಯ ಪೌಲ್ ಗಿಬ್ಲಿನ್ ಅವರು ಸಂಜೆ 6.33 ನಿಮಿಷಕ್ಕೆ ಗುರಿ ತಲುಪುವ ಮೂಲಕ ಕೇವಲ 12 ಗಂಟೆ 48 ನಿಮಿಷಗಳಲ್ಲಿ ಅಂತರವನ್ನು ಕ್ರಮಿಸಿ ಆತ್ರೇಯ ಅವರ ದಾಖಲೆಯನ್ನು ಅಳಿಸಿ ಹಾಕಿದರು.ಸ್ಪರ್ಧೆಯ 80 ಕಿ.ಮೀ ವಿಭಾಗದಲ್ಲಿ ಬೆಂಗಳೂರಿನ ಡಿ.ಧರ್ಮೇಂದ್ರ ಅವರು 9 ಗಂಟೆ 44 ನಿಮಿಷಗಳಲ್ಲಿ ಹಾಗೂ 50 ಕಿ.ಮೀ ವಿಭಾಗದಲ್ಲಿ ಮಹಾರಾಷ್ಟ್ರದ ನಾಗಪುರದ ಕೈರನ್ ಡಿಸೋಜ ಅವರು 4 ಗಂಟೆ 45 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿದರು.
ಕಳೆದ ಬಾರಿ 198 ಸ್ಪರ್ಧಿಗಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು, ಆದರೆ ಈ ಬಾರಿ ಜರ್ಮನಿ, ಅಮೇರಿಕಾ, ಇಂಗ್ಲೆಂಡ್, ಚೀನಾ ಕೊರಿಯಾ ಯು.ಕೆ ಸೇರಿದಂತೆ ದೇಶವಿದೇಶಗಳ 471 ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾಫಿ ಕಣಿವೆಯ ಸರ್ಪಸುತ್ತಿನ ಕಡಿದಾದ ಏರು ಹಾದಿಯಲ್ಲಿ ಸರಾಗವಾಗಿ ಓಡುವ ಮೂಲಕ ನೋಡುಗರ ಹುಬ್ಬೇರಿಸಿದರು. ಕಳೆದ ಕೆಲದಿನಗಳಿಂದ ಮಲೆನಾಡಿನಾದ್ಯಂತ ಸುರಿಯುತ್ತಿದ್ದ ಮಳೆ ಸ್ಪರ್ಧೆಯ ದಿನವಾದ ಶನಿವಾರ ಬೀಳದ ಹಿನ್ನೆಲೆಯಲ್ಲಿ ಯಾವುದೇ ಅಡತಡೆಗಳಿಲ್ಲದೆ ಪಂದ್ಯ ನಿರಾತಂಕವಾಗಿ ನಡೆಯಿತು.