ಚಿಕ್ಕಮಗಳೂರು : ಎರಡು ದಿನಗಳ ಕಾಲದ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಜಿಲ್ಲೆಯ ಲಾಲ್‍ಬಾಗ್ ಎಸ್ಟೇಟ್ ನಲ್ಲಿ ಶನಿವಾರ ಆರಂಭಗೊಂಡಿತು. ಕಾಫಿ ಡೇ ಪ್ಲಾಂಟೇಷನ್ಸ್ ಗ್ರೂಪ್‍ನ ಹಿರಿಯ ವ್ಯವಸ್ಥಾಪಕ ಬಿ.ಸಿ. ಚಿದಂಬರ್ ನಸುಕು ಹರಿಯುತ್ತಿದ್ದಂತೆ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ಜರ್ಮನಿ, ಇಗ್ಲೆಂಡ್, ಫ್ರಾನ್ಸ್, ಅಮೇರಿಕಾ, ಕೊರಿಯಾ ಸೇರಿದಂತೆ ದೇಶ, ವಿದೇಶಗಳ 441 ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾಫಿ ಕಣಿವೆಯ ಸರ್ಪಸುತ್ತಿನ ಕಡಿದಾದ ಹಾದಿಯಲ್ಲಿ ಓಡುವ ಮೂಲಕ ನೋಡುಗರ ಮೈನವಿರೇಳಿಸಿದರು.
ದೇಶ, ವಿದೇಶಗಳ ಓಟಗಾರರು ಆಗಮಿಸುತ್ತಿದ್ದಂತೆ ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ನಿಂತ ಗ್ರಾಮೀಣ ಜನತೆ ಕೌತುಕದಿಂದ ವೀಕ್ಷಿಸುವುದರ ಜೊತೆಗೆ ಚಪ್ಪಾಳೆ ತಟ್ಟುವ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಬೆಂಗಳೂರಿನ 84 ವರ್ಷದ ವೃದ್ಧ ಓಟಗಾರ ಜಗನ್ನಾಥ್ ಅವರು 50 ಕಿ.ಮೀ. ವಿಭಾಗದಲ್ಲಿ ಪಾಲ್ಗೊಂಡು ಸರಾಗವಾಗಿ ಓಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸ್ಪರ್ಧೆಯ ಕುರಿತು ವಿವರ ನೀಡಿದ ಮ್ಯಾರಥಾನ್ ನಿರ್ದೇಶಕ ಶಾಮ್‍ಸುಂದರ್ ಕಳೆದ ಬಾರಿ 198 ಓಟಗಾರರು ಭಾಗವಹಿಸಿದ್ದು, ಈ ಬಾರಿ ಸ್ಪರ್ಧಾಳುಗಳ ಸಂಖ್ಯೆ 441 ಕ್ಕೆ ಏರಿರುವುದು ಮ್ಯಾರಥಾನ್ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
110 ಕಿ.ಮೀ. ವಿಭಾಗದಲ್ಲಿ ಪಾಲ್ಗೊಂಡಿದ್ದ ವಿಶ್ವದ 4 ನೇ ಶ್ರೇಯಾಂಕದ ಓಟಗಾರ ಸ್ಕಾಟ್ಲೆಂಡ್‍ನ ಪಾಲ್ ಗಿಬ್ಲಿನ್ ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ನಡೆಯುತ್ತಿರುವ ಸ್ಪರ್ಧೆ ತಮಗೆ ವಿಭಿನ್ನ ಅನುಭವ ನೀಡಿದೆ. ಇಲ್ಲಿನ ತಂಪಾದ ಹವಾಮಾನ ಓಟಕ್ಕೆ ಅತ್ಯಂತ ಪೂರಕವಾಗಿದೆ ಎಂದರು. 110 ಕಿ.ಮೀ. ವಿಭಾಗದ ಕಳೆದ ಬಾರಿ ಸ್ಪರ್ಧೆಯ ವಿಜೇತ ಬೆಂಗಳೂರಿನ ಆತ್ರೇಯ ಮಾತನಾಡಿ ಮಲೆನಾಡಿನ ಗಿರಿ ಕಂದರಗಳು, ಕಾಫಿ ಕಣಿವೆಗಳು ಮ್ಯಾರಥಾನ್ ಓಟಕ್ಕೆ ಅತ್ಯಂತ ಸ್ಪೂರ್ತಿ ನೀಡುವ ತಾಣಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 16 ವಿದೇಶಿಯರು, 21 ಮಹಿಳೆಯರು ಸೇರಿದಂತೆ ಸ್ಪರ್ಧೆಯ 80 ಕಿ.ಮೀ. ವಿಭಾಗದಲ್ಲಿ 70 ಹಾಗೂ 110 ಕಿ.ಮೀ. ವಿಭಾಗದಲ್ಲಿ 160 ಓಟಗಾರರು ಪಾಲ್ಗೊಂಡು ರೋಚಕ ಅನುಭವ ನೀಡಿದರು.
ಜಿಲ್ಲೆಯ ಲಾಲ್‍ಬಾಗ್ ಎಸ್ಟೇಟ್ ನಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆಯ 50 ಕಿ.ಮೀ. ವಿಭಾಗದಲ್ಲಿ 4 ಗಂಟೆ 45 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಮಹಾರಾಷ್ಟ್ರದ ನಾಗಪುರದ ಕೈರನ್ ಪ್ರಥಮ ಸ್ಥಾನ ಗಳಿಸಿದರು. 5 ಗಂಟೆ ಅವಧಿಯಲ್ಲಿ 50 ಕಿ.ಮೀ. ಅಂತರವನ್ನು ಕ್ರಮಿಸುವ ಮೂಲಕ ಗುಜರಾತ್ ರಾಜ್ಯದ ಸೂರತ್‍ನ ಸಂದೀಪ್ ಕುಮಾರ್ ದ್ವಿತೀಯ ಹಾಗೂ 5 ಗಂಟೆ 02 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಮಹಾರಾಷ್ಟ್ರದ ಔರಂಗಾಬಾದ್‍ನ ಕುಲಭೂಷಣ್ ತೃತೀಯ ಸ್ಥಾನ ಪಡೆದುಕೊಂಡರು.
ಸ್ಪರ್ಧೆಯ ನಂತರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮ್ಯಾರಥಾನ್ ನಿರ್ದೇಶಕ ಶಾಮಸುಂದರ್ ವಿಜೇತರಿಗೆ ಬಹುಮಾನ ವಿತರಿಸಿದರು. ದೇಶ ವಿದೇಶಗಳ 250 ಓಟಗಾರರು ಈ ವಿಭಾಗದಲ್ಲಿ ಸ್ಪರ್ಧಿಸಿ ನೋಡುಗರ ಗಮನ ಸೆಳೆದರು. 80 ಕಿ.ಮೀ. ವಿಭಾಗದ ಸ್ಪರ್ಧೆ ರಾತ್ರಿ ವೇಳೆಗೆ ಹಾಗೂ 110 ಕಿ.ಮೀ. ವಿಭಾಗದ ಸ್ಪರ್ಧೆ ಭಾನುವಾರ ಬೆಳಿಗಿನ ವೇಳೆಗೆ ಮುಕ್ತಾಯಗೊಳ್ಳಲಿದೆ.