ಕಲ್ಯಾಣ ಮಂಟಪಗಳಲ್ಲಿ ಬಾಲ್ಯ ವಿವಾಹ ನಿಷೇಧ ಫಲಕ ಕಡ್ಡಾಯ

496

ಚಿಕ್ಕಮಗಳೂರು : ಬಾಲ್ಯ ವಿವಾಹ ನಿಷೇಧ ಕುರಿತ ಫಲಕಗಳನ್ನು ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಬಾಲ್ಯ ವಿವಾಹ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಅಪರಾಧವಾಗಿದ್ದು ಕಲ್ಯಾಣ ಮಂಟಪಗಳಲ್ಲಿ ಬಾಲ್ಯ ವಿವಾಹ ಮಾಡಲು ಅವಕಾಶ ನೀಡಬಾರದು ಒಂದು ವೇಳೆ ಅಂತಹ ಪ್ರಕರಣ ಕಂಡುಬಂದರೆ ಕಾನೂನು ರೀತ್ಯಾ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧವು ಕೂಡ ಕ್ರಮ ಜರುಗಿಸಲಾಗುವುದು ಎಂದ ಅವರು ಜಿಲ್ಲೆಯಲ್ಲಿ ೯ ನೇ ತರಗತಿಯಿಂದ ೧೦ನೇ ತರಗತಿಗೆ ಉತ್ತೀರ್ಣರಾಗಿರುವ ೧೮೨ ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ದಾರೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಶಾಲೆ ಬಿಟ್ಟ ವಿದ್ಯಾರ್ಥಿನಿಯರ ಪೋಷಕರ ಮನೆಗಳಿಗೆ ಭೇಟಿ ನೀಡಿ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಬೇಕು ಎಂದ ಅವರು ಹೆಣ್ಣು ಮಕ್ಕಳನ್ನು ೧೮ ವಯಸ್ಸಿನೊಳಗೆ ವಿವಾಹ ಮಾಡಲು ಕಾರಣ ಕುಟುಂಬದ ಬಡತನ, ಒಳ್ಳೆಯ ವರ ಸಿಗುತ್ತಾನೆಂಬ ನಂಬಿಕೆಯಿಂದ ಮಾಡುತ್ತಾರೆ. ಅಂತಹ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಬೇಕು ಇದು ಇಲಾಖೆಯ ಕರ್ತವ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ನಡೆದಿಲ್ಲ ಬಾಲ್ಯ ವಿವಾಹ ಮಾಡುವ ಕುರಿತು ಮಾಹಿತಿ ಬಂದ ತಕ್ಷಣ ಅಂತಹ ಪೋಷಕರ ಮನೆಗೆ ತೆರಳಿ ಅವರ ಮನವೊಲಿಸಿ ಬಾಲ್ಯ ವಿವಾಹವಗಳನ್ನು ತಡೆಯಲಾಗಿದೆ, ಚಿಕ್ಕಮಗಳೂರು ತಾಲ್ಲೂಕಿನಲ್ಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ೧೩ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ೪ ಪ್ರಕರಣಗಳು ಮುಕ್ತಾಯಗೊಂಡಿವೆ, ೩ ಪ್ರಕರಣಗಳು ಮಿಡಿಯೇಷನ್ ಹಂತದಲ್ಲಿದ್ದು, ೬ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ, ತರೀಕೆರೆ ತಾಲ್ಲೂಕಿನಲ್ಲಿ ಆಗಸ್ಟ್ ಮಾಹೆಯ ಅಂತ್ಯದವರೆಗೆ ೩೦ ಪ್ರಕರಣಗಳಿದ್ದು ೨ ಸಮಾಲೋಚನೆ ಮೂಲಕ ಇತ್ಯರ್ಥಗೊಳಿಸಲಾಗಿದೆ ಉಳಿದ ೨೮ ಪ್ರಕರಣಗಳಲ್ಲಿ ೨೪ ಪ್ರಕರಣ ನ್ಯಾಯಾಲಯದ ವಿಚಾರಣಾಂತದಲ್ಲಿದೆ ೪ ಪ್ರಕರಣ ಕಚೇರಿ ಹಂತದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ|| ಎಸ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ದೊಡ್ಡಮಲ್ಲಪ್ಪ, ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here