ನವದೆಹಲಿ – ಅಜಾತ ಶತ್ರು ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೂತ್ರ ಸೋಂಕಿನಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಶಿಂದೆ ಕಿ ಚವ್ವಾಣಿ ಹಳ್ಳಿಯಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ವಾಜಪೇಯಿ ಜನಿಸಿದ್ದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.ಅಟಲ್ ಜೀ ರಾಜಕಾರಣಿ ಮಾತ್ರವಲ್ಲ, ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕರೂ ಹೌದು. ಅವರು ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. 1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದ ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆ ಆಗಿದ್ದರು.