ಒಂಟಿತನದ ಕೊರಗು ಮತ್ತು ಜಂಟಿತನದ ಮೆರಗು!

582
firstsuddi

      ರಾಘವನ್ ಡೆಕ್ಕನ್ ಕ್ರೋನಿಕಲ್ ಪತ್ರಿಕೆಯ ಹಿರಿಯ ವರದಿಗಾರರಾಗಿ ಇದ್ದವರು. ಅಪರಾಧ ವರದಿಗಾರಿಕೆಯಲ್ಲಿ ಎತ್ತಿದ ಕೈ. ನಿವೃತ್ತಿಯ ನಂತರ ಇವರನ್ನು ಪೊಲೀಸ್ಅಕಾಡೆಮಿಯಲ್ಲಿ ವಿಶೇಷ ಪ್ರವಚನ ಕೊಡಿಸಲುಕರೆದೊಯ್ಯುತ್ತಿದ್ದರು ಹೀಗಾಗಿ ರಾಜ್ಯದ ಬಹುತೇಕ ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಘವನ್ಚಿರಪರಿಚಿತರಾಗಿದ್ದರು. ಇವರಿಗೆ ಪೊಲೀಸರೇ ನೆಂಟರು. ಬಂಧು-ಬಳಗ ಎಲ್ಲವೂ ಆಗಿದ್ದರು. ಕಾರಣ, ರಾಘವನ್ಅವಿವಾಹಿತರು. ಯಾವುದೇ ರಕ್ತ ಸಂಬಂಧವನ್ನುಇಟ್ಟುಕೊಂಡಿದ್ದವರಲ್ಲ. ಇವರಲ್ಲಿದ್ದ ಜ್ಞಾನವೇ ಇವರಿಗೆಜೊತೆಗಾರ. ಇದನ್ನು ಬಳಸಿಕೊಳ್ಳಲು ಕಲಾಸಿಪಾಳ್ಯಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ಹೋಟೆಲ್‌ನಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ ಮಾಡಿಸಿಕೊಟ್ಟಿದ್ದರು.

ಅದೊಂದು ದಿನ ಹಿರಿಯ ಪತ್ರಕರ್ತ ಸಂಗಮದೇವ ಅವರುಕಲಾಸಿಪಾಳ್ಯ ಪೊಲೀಸ್ ಠಾಣೆ ಠಾಣಾಧಿಕಾರಿ ಉಮೇಶ್ ಅವರನ್ನು ಭೇಟಿಯಾಗಲು ಜೊತೆಗೆ ಕರೆದೊಯ್ದಿದ್ದರು. ನಾನಾಗ ಪತ್ರಕರ್ತರ ಸಂಘದ ಸಂಚಾಲಕನಾಗಿದ್ದೆ. ಇದಾಗಿ ಎರಡು ದಿನಕ್ಕೆ ಉಮೇಶ್ ಅವರು ಕರೆ ಮಾಡಿ ರಾಘವನ್ಎಂಬ ಕ್ರೈಮ್ ವರದಿಗಾರನಿಗೆ ಹೃದಯಾಘಾತವಾಗಿ ಅಸುನೀಗಿದ್ದಾರೆ. ಪತ್ರಕರ್ತರಾಗಿರುವುದರಿಂದ ಅಂತ್ಯಕ್ರಿಯೆನಡೆಸಲು ಮುಂದಾಗಿ ಎಂದು ವಿನಂತಿಸಿಕೊಂಡರು. ಇವರ ಕರೆಯ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ದೇಹಪಡೆದೆ. ಮೂರು ದಿನಗಳಿಂದ ಕಾದಿದ್ದರಿಂದ ದೇಹದಿಂದ ಸಣ್ಣದಾಗಿ ವಾಸನೆ ಬರುತ್ತಿತ್ತು. ಪೊಲೀಸರು ತಂದಿದ್ದ ಪರಿಮಳದ್ರವ್ಯವನ್ನು ಸಿಂಪಡಿಸಿ, ಹೂವಿನ ಅಲಂಕಾರ ಮಾಡಿ ವಿಲ್ಸನ್ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿಕೊಟ್ಟೆ. ಅವರ ದೇಹಕ್ಕೆ ಅಂತಿಮ ವಿಧಿ ವಿಧಾನಗಳನ್ನು ನಡೆಸುವಾಗ ನನ್ನ ಕಣ್ಣಾಲಿಗಳು ತುಂಬಿ ಬಂದವು. ಹಿರಿಯ ಜೀವ, ಅದರಲ್ಲೂ ಬ್ರಾಹ್ಮಣರು. ನನ್ನಂತಹ ಅಪರಿಚಿತ ಶೂದ್ರನ ಕೈಯಲ್ಲಿ ಅಂತ್ಯಕ್ರಿಯೆಗೆ ಒಳಗಾಗುತ್ತಿದೆಯಲ್ಲಾ. ಅವರ ಆತ್ಮಕ್ಕೆ ಶಾಂತಿಲಭಿಸುವುದೇ? ಎಂಬ ಪ್ರಶ್ನೆ ಕಾಡಲಾರಂಭಿಸಿತು. ಆದರೂ, ಇದ್ಯಾವುದನ್ನೂ ಲೆಕ್ಕಿಸದೇ, ಚಿತಾಭಸ್ಮವನ್ನು ಪಡೆದು, ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜಿಸಲು ವ್ಯವಸ್ಥೆಮಾಡಿದೆ.

ಮರುದಿನ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿದ್ದ ಪತ್ರಕರ್ತರ ಸಂಘದಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಸಭೆಗೆಹಂತ ಪತ್ರಿಕೆಯ ಸಂಪಾದಕರಾಗಿದ್ದ ವೆಂಕಟ ಲಕ್ಷ್ಮಯ್ಯ, ಹಿರಿಯ ಪತ್ರಕರ್ತರಾದ ಮುಳ್ಳಹಳ್ಳಿ ಸೂರಿ, ಮೈಸೂರು ನಾಗರಾಜ್, ಪತ್ರಕರ್ತೆ ಶಾಂತಕುಮಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಆಗ ಮೊಳೆತಿದ್ದೇ ಪತ್ರಕರ್ತರಿಗೆ ಸೂರು ಒದಗಿಸುವ ಯೋಜನೆ ಅಂದಿನ ಪ್ರಜಾವಾಣಿಯ ಬೆಂಗಳೂರು ಪೇಜ್ ನಲ್ಲಿ ಇದು ಸುದ್ದಿಯೂ ಆಯಿತು. ಮುಂದೆ ಹಿರಿಯಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರಮುಂದಾಳತ್ವದಲ್ಲಿ ಬಿ.ವಿ.ಮಲ್ಲಿಕಾರ್ಜುನಯ್ಯ, ಬಿ.ನಾರಾಯಣ, ನಾರಾಯಣಸ್ವಾಮಿ, ಬಸವರಾಜ ನಾಯಕ, ಸಿ.ನಾರಾಯಣಸ್ವಾಮಿ, ದುನಿಯಾ ಮುನಿಯಪ್ಪ, ಶಂಕರೇಗೌಡರನ್ನೆಲ್ಲಾ ಸೇರಿಸಿ ಪತ್ರಕರ್ತರ ಗೃಹ ನಿರ್ಮಾಣಸಹಕಾರ ಸಂಘವನ್ನು ಕಟ್ಟಲಾಯಿತು. ನಿವೇಶನವನ್ನು ಹಂಚಲಾಯಿತು. ಆದರೆ, ಪತ್ರಕರ್ತರ ಆರೋಗ್ಯ ಧಾಮ ಸ್ಥಾಪಿಸಬೇಕೆಂಬ ನನ್ನ ಕನಸು, ನನಸಾಗಲೇ ಇಲ್ಲ. ಗಣಿಗಲಭೆಯಿಂದ ನಮ್ಮ ಪ್ರಸ್ತಾವನೆ ಸರ್ಕಾರದಲ್ಲಿ ನೆನೆಗುದಿಗೆಬಿದ್ದಿತು.

ಇದಿರಲಿ, ಅಂದಿನ ಈ ಟಿವಿ ಕನ್ನಡನಾಡಿಯಲ್ಲಿ ಪತ್ರಕರ್ತ ರಾಘವನ್ ಅಂತ್ಯಕ್ರಿಯೆ ಪ್ರಮುಖ ಸುದ್ದಿಯಾಗಿ ಪ್ರಸಾರವಾಯಿತು. ಸುದ್ದಿ ನೋಡಿದ ಪತ್ರಕರ್ತ ಸಂಜಯ್ದೊರೈ ’ಏನ್ರಿ, ಬ್ರಾಹ್ಮಣರ ಅಂತ್ಯಕ್ರಿಯೆ ನಡೆಸಿದ್ದೀರಿ’ ವೈಕುಂಠಕೂಡ ಮಾಡಿ ಎಂಬ ಸಲಹೆ ಕೊಟ್ಟರು. ಅವರೊಂದಿಗೆ ಕುಳಿತಿದ್ದ ಎಸ್.ಸಿ.ಟಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥರಾಗಿದ್ದಸುಬ್ರಮಣ್ಯ ಅವರು ವೈಕುಂಠದ ವೆಚ್ಚ ನಾನು ಭರಿಸುವೆ. ಒಂಟಿಬ್ರಾಹ್ಮಣ ಬೇರೇ, ವೈಕುಂಠ ಮಾಡಿಸಿ ಎಂದರು. ಹೀಗಾಗಿ ಬನಶಂಕರಿಯಲ್ಲಿ ವೈಕುಂಠವನ್ನು ಮಾಡಿಸಿದೆ. ಬಹುಷಃ ನನ್ನವೃತ್ತಿಪರ ಬದುಕಿನಲ್ಲಿ ಸೇವೆ ಸಲ್ಲಿಸಲು ಸಿಕ್ಕ ಬಹುದೊಡ್ಡ ಅವಕಾಶ ಇದೆಂದು ಇಂದಿಗೂ ಭಾವಿಸಿರುವೆ.

ಸುಮಾರು ಎಂಟು ವರ್ಷಗಳ ನಂತರ ಇವೆಲ್ಲವೂ ಮಾಲತೇಶ್ ಅರಸ್ ಪ್ರಸ್ತಾಪಿಸಿದ ವಿವಾಹದಿಂದಾಗಿ ನೆನಪಾಯಿತು. ಮರೆಯಾಗಿ ಲೀನವಾಗಿರುವ ರಾಘವನ್ ಕೂಡ ನೆನಪಿಗೆ ಬಂದರು. ಇಷ್ಟಕ್ಕೂ ಮಾಲತೇಶ್ ಅರಸ್, ಪ್ರಸ್ತಾಪಿಸಿದ್ದು ನನ್ನಸಹೋದರನ ವಿವಾಹದ ಕುರಿತು. ಕೈತುಂಬ ಅಲ್ಲದಿದ್ದರೂ, ಬದುಕಿಗೆ ಬೇಕಾಗುವಷ್ಟು ಸಂಬಳ ಪಡೆಯುವ ಉದ್ಯೋಗದಲ್ಲಿದ್ದಾನೆ. ತುಂಬಾ ಸಂಭಾವಿತ, ಅತಿಯಾದಸರಳತೆ ಯಾರನ್ನೂ ಗದರಿಸಿ ಮಾತನಾಡಿದವನಲ್ಲ. ಅಕ್ಕ-ತಂಗಿಯರ ವಿವಾಹ ಮಾಡಿಸುವ  ಜವಾಬ್ದಾರಿ ಹೊತ್ತು, ವಯಸ್ಸು ಮೀರುವುದನ್ನು ಮರೆತು ಬದುಕುತ್ತಿರುವ ನಿಸ್ವಾರ್ಥಜೀವಿ. ಅದೊಂದು ತರಹ ಬೆಂಕಿಯಲ್ಲಿ ಅರಳಿದ ಗಂಡು ಹೂವು ಎಂದೇ ಹೇಳಬಹುದು. ವಯಸ್ಸು ೪೦ ವರ್ಷಇರಬಹುದು, ನನಗೆ ಸಿಕ್ಕಾಗ ಮದುವೆ ಬಗ್ಗೆ ಹೇಳುತ್ತಲೇ ಇರುತ್ತೇನೆ. ಆದರೆ, ಒಂದು ದಿನವೂ ಸ್ಪಷ್ಟವಾಗಿ ಉತ್ತರ ನೀಡಿದವನಲ್ಲ. ಹಾರಿಕೆಯ ಉತ್ತರ ನೀಡಿಯೋ ಅಥವಾ ಬೇರೊಂದು ವಿಚಾರ ಇಟ್ಟಿಯೋ, ವಿಷಯಾಂತರ ಮಾಡಿಸುವಷ್ಟು ಜಾಣ.

ನೋವೆಂಬುದು ಆತನ ಬಾಯಿಂದ ಹೊರಬೀಳುವ ಪ್ರತಿಶಬ್ಧದಲ್ಲಿಯೂ ಇರುತ್ತಿತ್ತು. ಅವನು ನನ್ನ ಆತ್ಮೀಯ ಗೆಳೆಯ. ಕೊಯಂಬತ್ತೂರಿನಲ್ಲಿ ವಾಸ. ಅನಾರೋಗ್ಯದ ಕಾರಣ ತನ್ನಶೇರುದಾರಳನ್ನು ಕಳೆದುಕೊಂಡಿದ್ದ. ಅದನ್ನು ಮರೆಸಲೇಸುಗನೋವನ್ನು ಅಕ್ಷರ ರೂಪದಲ್ಲಿ ಬರೆದು ಕಳಿಸಿದ್ದ, ಅದು ಹೀಗಿತ್ತು. ಹೊರಗೆ ಜಿಟಿ ಜಟಿ ಮಳೆ ಸುರಿಯುತ್ತಿದೆ, ಮಳೇಭೋರ್ಗೆರೆಯುವಾಗ ವ್ಯಕ್ತಿಯೊಬ್ಬ ಮನೆಯೊಳಗೆ ಏನುಮಾಡಬಹುದು? – ಕುಡಿಯಬಹುದೇ? ಟಿವಿ ವೀಕ್ಷಿಸಬಹುದೇ? ಪುಸ್ತಕ ಓದಬಹುದೇ? ಮನೆಯೊಳಗೆ ಕಸ-ಕಡ್ಡಿಸ್ವಚ್ಛಗೊಳಿಸಬಹುದೇ? ಜೊತೆಗಾರ್ತಿ ಇಲ್ಲದ ಮೇಲೆ ಏನುಮಾಡಬಹುದು? ಇವು ಪ್ರಶ್ನೆಗಳಲ್ಲ, ಅಕ್ಷರ ರೂಪದಲ್ಲಿಮೈದಳೆದ ನೋವಿನ ನುಡಿಗಳು. ವಯಸ್ಸಿನಲ್ಲಿರುವಾಗ, ಆರೋಗ್ಯ ಉತ್ತಮವಾಗಿರುವಾಗ ಒಂಟಿಯಾಗಿ ಬದುಕಬಹುದು, ಆದರೆ, ವಯಸ್ಸು ದಾಟಿದಾಗ, ಆರೋಗ್ಯ ಹದಗೆಟ್ಟಾಗ ಎಂತಹ ಪರಿಸ್ಥಿತಿ ಎದುರಾಗಬಹುದು?

ನಾನು ಪ್ರತಿನಿತ್ಯ ವಾಕಿಂಗ್ ಮಾಡುವ ರಸ್ತೆಯಲ್ಲಿ ಬ್ರೇಕಿಂಗ್ನ್ಯೂಸ್ ಬಂದಿತ್ತು. ಆದರೆ, ಯಾವುದೇ ಮಾಧ್ಯಮಗಳಲ್ಲೂ ಬರಲಿಲ್ಲ. ಒಂಟಿಯಾಗಿ ಮನೆಯೊಂದರಲ್ಲಿ  ಬಾಡಿಗೆಗೆ ಇದ್ದವ್ಯಕ್ತಿ ಹಲವು ದಿನಗಳಿಂದ ಕಾಣುತ್ತಿರಲಿಲ್ಲ. ಇವನ ಕುಟುಂಬಸ್ಥರು ವಿದೇಶದಲ್ಲಿ ನೆಲೆಸಿದ್ದರು. ಇದನ್ನು ಬಿಟ್ಟರೆ, ಇನ್ಯಾವ ಮಾಹಿತಿಯೂ ಇಲ್ಲ. ಅಕ್ಕ-ಪಕ್ಕದವರು ಮನೆಯಬೀಗ ಒಡೆದು ಪರೀಕ್ಷಿಸಲು ಮುಂದಾಗಿದ್ದರು. ಆದರೆ ಮನೆಯೊಳಗಡೆಯಿಂದ ಒಂದು ರೀತಿಯ ವಾಸನೆ ಬರುತ್ತಿದ್ದುದರಿಂದ ಬಾಗಿಲು ಹೊಡೆಯುವ ದುಸ್ಸಾಹಸಕ್ಕೆಯಾರೂ ಮುಂದಾಗಿರಲಿಲ್ಲ. ಅಂತೂ ಪೊಲೀಸರ ಮಧ್ಯಪ್ರವೇಶದಿಂದ ಅಸ್ಥಿಪಂಜರ ಹೊರಬಂತು.

ಇವೆಲ್ಲವೂ ನಮ್ಮ ಬದುಕಿನಲ್ಲಿ ಕಾಣುವ ಘಟನೆಗಳು. ಒಂಟಿತನದ ಬದುಕಿಗೊಂದು ಉತ್ತಮ ಉದಾಹರಣೆ ಎಂದು ಓದುಗರ ಮುಂದಿಟ್ಟರುವೆ. ಅವಿಭಕ್ತ ಕುಟುಂಬಕ್ಕೆ ಹೆಸರಾದ ನಾವುಗಳಿಂದು ಅವಿಭಕ್ತ ಎಂದರೇನೆಂಬುದನ್ನೇ ನಿಘಂಟಿನಲ್ಲಿ ಹುಡುಕಿ ಅರಿಯುವ ಮಟ್ಟಿಗೆ ಬಂದು ನಿಂತಿದ್ದೇವೆ. ಇವತ್ತು ಸಾಂಪ್ರದಾಯಿಕ ವ್ಯವಸ್ಥೆಗಳು ಹುಸಿಯಾಗುತ್ತಿವೆ. ಕಳೆದೆರಡು ದಶಕಗಳ ಹಿಂದೆ ’ವಿವಾಹ’ ಎಂಬುದು ಮಾತುಕತೆ ಮೂಲಕ ನಡೆಯುತ್ತಿತ್ತು. ಮಧ್ಯಸ್ಥರು ಎರಡೂ ಬಾರಿ ಸುತ್ತಾಡಿದ್ದರೆ ಮದುವೆ ನಿಶ್ಚಯವಾಗುತ್ತಿತ್ತು. ಆದರೆ, ಇವತ್ತು ಮಧ್ಯವರ್ತಿಗಳ ಸ್ಥಳದಲ್ಲಿ ಜಾಹೀರಾತು, ಸಾಮಾಜಿಕ ಮಾಧ್ಯಮಗಳು ಬಂದು ನಿಂತಿವೆ. ಪ್ರತಿಯೊಂದು ಸಮುದಾಯದ ಸಂಘಟನೆಗಳು ದೇಗುಲಗಳು, ಚರ್ಚ್, ಮಸೀದಿಗಳು ಅತ್ಯಾಧುನಿಕ ವ್ಯವಸ್ಥೆಯುಳ್ಳ ಮಾಹಿತಿ ಕೇಂದ್ರವನ್ನು ತೆರೆದು ಕೂತಿವೆ. ವಧು-ವರಾನ್ವೇಷಣೆ ಮೇಳದಲ್ಲಿಯೇ ತಮಗೆ ಸರಿ ಹೊಂದುವ ಜೋಡಿಯೊಂದಿಗೆ, ಮಾತನಾಡಿ ಅಲ್ಲಿಂದಲೇ ಜೊತೆಯಾಗಿ ಹೊರಹೋಗಿರುವ ಘಟನೆಗಳು ಸಾಕಷ್ಟಿವೆ.

ವಿವಾಹ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದ. ವಿವಾಹದೆಡೆಗೆ ಪಯಣ ಎಂದರೆ ಅದು ಐಹಿಕವಾದಿಯಪಾಲಿಗೆ ಕಾಮವಾಗಿ ಕಂಡುಬಂದರೆ, ಪರಿವ್ರಾಜಕನ ಪಾಲಿಗೆ ಆತ್ಮವಾಗಿರುತ್ತದೆ. ಪರಸ್ಪರ ಸಹಬಾಳ್ವೆ, ಬಿಡಿಸಲಾಗದ ಅನುಬಂಧ, ಅನ್ಯೋನ್ಯತೆ ಇವೆಲ್ಲದರ ರೂಪವೇ ವಿವಾಹ. ಎರಡು ಹೃದಯಗಳ ಸಮ್ಮಿಲನವೇ ಮದುವೆ. ವಿವಾಹದಿಂದ ಕುಟುಂಬ ಆರಂಭವಾಗುತ್ತದೆ. ದೈಹಿಕ ಬಯಕೆಯಿಂದ  ಅನೈಸರ್ಗಿಕ, ಅನೈತಿಕ ಸುಖಕ್ಕಾಗಿ ಹಾತೊರೆಯದಿರಲೆಂದು’ವಿವಾಹ’ ದ ಚೌಕಟ್ಟಿನಲ್ಲಿ ಜನರನ್ನು ತರಲಾಗಿದೆ. ಇದೇ ವಿವಾಹದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.

ವಿವಾಹ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧಕ್ಕೆಮಾತ್ರ ಸೀಮಿತವಾಗಿರುವುದಿಲ್ಲ, ಬದಲಿಗೆ ಹಲವು ಕುಟುಂಬಗಳ ನಡುವೆ ಪ್ರೀತಿಯ ಸೇತುಬಂಧವನ್ನುನಿರ್ಮಿಸುತ್ತದೆ. ವಿವಾಹ ಒಂದು ಜನಾಂಗ, ಒಂದು ವಂಶಾವಳಿಯ ಮುಂದುವರಿಕೆ ಮಾತ್ರವಲ್ಲದೇ, ಜೀವನದ ಅರ್ಥ ತಿಳಿಸಿಕೊಡುವ ಒಂದು ಸಾಧನವೂ ಆಗಿದೆ. ಇದಿಷ್ಟೇಅಲ್ಲದೇ ವಿವಾಹ ಎಂಬುದು ಹೊಣೆಗಾರಿಕೆಯೂ ಆಗಿದೆ. ವಿವಾಹದಿಂದ ಸಂಪತ್ತು ಮತ್ತು ಅಧಿಕಾರ ಕೂಡ ವಿನಿಮಯಆಗುತ್ತದೆ.

ವಿವಾಹ ಎಂಬ ಸಂಭ್ರಮದ ಆಚರಣೆಯಲ್ಲಿ ಎರಡು ಕುಟುಂಬಗಳು ಮಾತ್ರ ಭಾಗಿಯಾಗುವುದಿಲ್ಲ. ಆ ಎರಡೂ ಕುಟುಂಬಗಳ ಸ್ನೇಹಿತರು, ನೆಂಟರಿಷ್ಟರು, ನೆರೆ-ಹೊರೆಯವರು, ಸಹದ್ಯೋಗಿಗಳು ಸೇರಿದಂತೆ ಒಂದು ಸಮೂಹವೇಪಾಲ್ಗೊಳ್ಳುತ್ತದೆ. ವಿವಾಹದಿಂದಾಗಿ ಸಮಾಜದಲ್ಲಿ ಸ್ಥಿರತೆ, ಅನ್ಯೋನ್ಯತೆ, ಸಮಗ್ರತೆ, ಸ್ನೇಹಪರತೆ ವೃದ್ಧಿಗೊಳ್ಳುತ್ತದೆ. ಜತೆಗೆ ಸಂಸ್ಕೃತಿಯ ಅರಿವು ಉಂಟಾಗುತ್ತದೆ. ಇದರಿಂದ ನೈತಿಕತೆ, ಸಾಮಾಜಿಕ ಮೌಲ್ಯಗಳು ಗಟ್ಟಿಗೊಳ್ಳುತ್ತವೆ. ವಿವಾಹದಲ್ಲಿ ಜರುಗುವ ಸಂಪ್ರದಾಯ, ವಿಧಿ-ವಿಧಾನಗಳ ನಡುವೆಯೂ ಜನಜಾತಿ, ಧರ್ಮ, ಅಂತಸ್ತು ಸೇರಿದಂತೆ ಎಲ್ಲವನ್ನೂ ಮರೆತು ಸಂಭ್ರಮದಿಂದ ಭಾಗಿಯಾಗುತ್ತಾರೆ.

ಹಿಂದು – ಮುಸಲ್ಮಾನ – ಕ್ರೈಸ್ತ – ಜೈನ – ಬೌದ್ಧ ಸೇರಿದಂತೆ ಯಾವುದೇ ಧರ್ಮೀಯರ ವಿವಾಹದಲ್ಲಿ ಕೇವಲ ಅದೊಂದೆ ಧರ್ಮದವರು ಮಾತ್ರ ಪಾಲ್ಗೊಳ್ಳುವುದಿಲ್ಲ. ನೂತನ ವಧುವರರನ್ನು ಆರ್ಶೀವದಿಸಲು, ಹಾರೈಸಲು ಸರ್ವಧರ್ಮೀಯರು ಕೂಡಿರುತ್ತಾರೆ. ಉದಾಹರಣೆ ಮಲ್ಲಪ್ಪನಮಗನ ಮದುವೆಯಲ್ಲಿ ಮುಸ್ತಾಫ್ ಕುಟುಂಬದವರು ಭಾಗಿಯಾಗಿರುತ್ತಾರೆ. ಮುಸ್ತಾಫ್ ಮಗಳ ಮದುವೆಯಲ್ಲಿ ಮಲ್ಲಪ್ಪನ ಕುಟುಂಬ ಸದಸ್ಯರು ಭಾಗಿಯಾಗಿರುತ್ತಾರೆ. ಅಂದರೆ ಅಸಹಿಷ್ಣುತೆಯನ್ನು ಮರೆತು ಒಂದಾಗಿ ಬೆರೆಯಲು, ಬೆಸೆಯುವ ಒಂದು ಪವಿತ್ರ ಬಂಧ ವಿವಾಹ.

ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ಎಲ್ಲಿ ನೋಡಿದರೂ ವಿವಾಹದ ಸುಗ್ಗಿ. ಆಗ ಮಳೆ ಹದವಾಗಿ ಬಿದ್ದರುತ್ತೆ. ಮರ-ಗಿಡಗಳೆಲ್ಲವೂ ಹಚ್ಚಹಸಿರಿನಿಂದ ಕೂಡಿರುತ್ತವೆ. ನಯನ ಮನೋಹರ ವಾತಾವರಣ ಇರುತ್ತದೆ. ನಾನು ಮದುವೆಯಾಗಿದ್ದು ಇದೇ ಕಾಲದಲ್ಲಿ. ನವ ವಧು-ವರರಿಗೆ ಹೇಗೆಪೂರಕ ಕಾಲವೋ ಅದೇ ರೀತಿ ಓದುವ ಮಕ್ಕಳಿಗೂ ಸಂತಸದ ದಿನಗಳವು. ಏಕೆಂದರೆ, ಅರ್ಧ ವಾರ್ಷಿಕ ಪರೀಕ್ಷೆ ಮುಗಿದು, ದಸರ ರಜೆಯನ್ನು ಸೊಗಸಾಗಿ ಸವಿಯುತ್ತವೆ. ಇಂತಹ ಸಮಯದಲ್ಲಿ ವಿವಾಹದ ಊಟ ಮಕ್ಕಳಿಗೆ ಅಚ್ಚುಮೆಚ್ಚು.

ನಾನು ಸಣ್ಣವನಿದ್ದಾಗ ನನ್ನೂರಿನ ಶ್ರೀಮಂತ ಜನ ವಧುವನ್ನುಕಲ್ಯಾಣ ಮಂಟಪಕ್ಕೆ ಪಲ್ಲಕ್ಕಿಯ ಮೇಲೆ ಹೊತ್ತು ತರುತ್ತಿದ್ದರು. ವರನನ್ನು ದೃಢಕಾಯವುಳ್ಳ ಕುದುರೆಯ ಮೇಲೆ ಕೂರಿಸಿ ಕರೆತರುತ್ತಿದ್ದರು. ಪಲ್ಲಕ್ಕಿ ಎಂದರೆ ಅದು ಹೂವಿನ ಪಲ್ಲಕ್ಕಿಯಲ್ಲಿ, ಚಿನ್ನಲೇಪಿತ ಪಲ್ಲಕ್ಕಿ. ಅಥವಾ ಬೆಳ್ಳಿ ಲೇಪಿತ ಪಲ್ಲಕ್ಕಿಗಳಾಗಿರುತ್ತಿದ್ದವು. ಪಲ್ಲಕ್ಕಿಯಲ್ಲಿ ವಧು ಸಾಗುತ್ತಿದ್ದರೆ, ಮುಂದೆ ಬ್ರಾಸ್ ಬ್ಯಾಂಡ್‌ನವರಿಂದ ಆರ್ಕೆಸ್ಟ್ರಾ ಇರುತ್ತಿತ್ತು. ಆರ್ಕೆಸ್ಟ್ರಾದಲ್ಲಿ ತಾಳಿ ಕಟ್ಟುವ ಶುಭವೇಳೆ ಗೀತೆಯನ್ನು ಕಡ್ಡಾಯವಾಗಿ ಹಾಡಿಸಲಾಗುತ್ತಿತ್ತು. ವಧುವಿನ ಸೌಂದರ್ಯ, ನಡತೆ ಕುರಿತಂತೆಯೂ ಹಾಡುಕಟ್ಟಿ ಹಾಡುತ್ತಿದ್ದರು. ಸಂಪ್ರದಾಯದಂತೆ ಹಿಂದುಳಿದ ವರ್ಗದ ಜನ ಒಲಂಪಿಕ್ಜ್ಯೋತಿಯನ್ನು ಹೋಲುವ ದೀಪವನ್ನು ಹಿಡಿದು ಮುಂದೆಸಾಗುತ್ತಿದ್ದರು. ಇವರಿಗೆ ಒತ್ತಾಸೆಯಾಗಿ ಟ್ಯೂಬ್ ಲೈಟ್‌ಗಳನ್ನು ಹೊತ್ತವರು, ಪೆಟ್ರೋಲ್ ದೀಪ ಹೊತ್ತವರು, ನಾದಸ್ವರ ತಂಡದವರು ಹೆಜ್ಜೆ ಹಾಕುತ್ತಿದ್ದರು. ಈ ದೃಶ್ಯ ಕಂಡಾಗ ನಾನುಸೇರಿದಂತೆ ನನ್ನ ಗೆಳೆಯರೆಲ್ಲರೂ ಕುದುರೆ ಏರಿ ಹಸೆಮಣೆ ಏರುವುದು ಯಾವಾಗ? ಎಂದು ಕನಸು ಕಾಣುತ್ತಿದ್ದೆವು. ಇದುನನಸಾಗಲೇ ಇಲ್ಲ. ಕಾರಣ, ನಾನು ಮದುವೆಯಾಗುವ ಕಾಲಕ್ಕೆಇದು ಗುಜರಾತಿಗಳ ಸಂಪ್ರದಾಯ ಆಗಿಬಿಟ್ಟಿತ್ತು. ಒಂದು ವೇಳೆಇದ್ದಿದ್ದರೂ ನನ್ನಂತಹ ಶೂದ್ರ ಇಷ್ಟೊಂದು ಆಡಂಬರವಾಗಿ ವಿವಾಹ ಆಗುವುದು ಕನಸಿನ ಮಾತಾಗಿತ್ತು.

ಹಿಂದೆ ಕುಟುಂಬದಲ್ಲೊಂದು ವಿವಾಹ ಘೋಷಣೆಯಾದರೆ, ಆಮನೆಯಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿತ್ತು. ಹಿರಿಯರ ಆಶೀರ್ವಾದದ ಮಹಾಪೂರವೇ ಸಾಗಿ ಬರುತ್ತಿತ್ತು. ಹತ್ತಿರದ ನೆಂಟರುಮಾತ್ರವಲ್ಲದೇ, ದೂರದ ನೆಂಟರು ಕೂಡ ಮದುವೆ ಮನೆಯಲ್ಲಿಠಿಕಾಣಿ ಹೂಡುತ್ತಿದ್ದರು. ಇವರೆಲ್ಲರ ಸಮಾಗಮದಿಂದ ಮಾತುಕತೆ, ಹರಟೆ, ಒಣಮಾತು, ಸೊಕ್ಕಿನ ಮಾತು, ಥೈಲಿಯಮಾತುಗಳು ಹೊರ ಬರುತ್ತಿತ್ತು. ಮದುವೆ ಮನೆಯಲ್ಲಿದುಂದು ವೆಚ್ಚದ ಜೊತೆಗೆ ಸಡಗರ, ಸಂಭ್ರಮದವಾತಾವರಣವು ಇರುತ್ತಿತ್ತು.

ಇದಿಷ್ಟೇ ಅಲ್ಲದೇ, ವಿವಾಹ ವಧು-ವರರನ್ನು ಜೀವನ ಪೂರ್ತಿಶಾಂತಿ, ಸಹನೆ, ಸಹಬಾಳ್ವೆಯಿಂದ ಬದುಕುವುದನ್ನು ಕಲಿಸುತ್ತದೆ. ಹೀಗಾಗಿಯೇ ವಿವಾಹ ಎಂಬುದು ದೈವಿಕಪ್ರಜ್ಞೆಯಾಗಿತ್ತು. ವಿಚ್ಛೇದನ ಎಂಬುದು ಪರಕೀಯವಾಗಿತ್ತು. ಕೌಟುಂಬಿಕ ಸಂಘರ್ಷ ಅಪರೂಪವಾಗಿತ್ತು. ಭಿನ್ನಾಭಿಪ್ರಾಯವನ್ನು ಕೇವಲ ಮಾತುಕತೆಯಲ್ಲಿಯೇ ಇತ್ಯರ್ಥಪಡಿಸಲಾಗುತ್ತಿತ್ತು. ಸಾಮಾಜಿಕ ಅನ್ಯೋನ್ಯತೆಯಿಂದ ಬದುಕುವುದನ್ನು ಕಲಿಸಲು ’ವಿವಾಹ’ ಒಂದು ಸಂಸ್ಥೆ ಮತ್ತುಸಾಧನವೂ ಆಗಿತ್ತು. ಆದರೀಗ ವೈವಾಹಿಕ ಸಂಬಂಧಗಳಲ್ಲಿಪರಸ್ಪರ ಹೊಂದಾಣಿಕೆ ಇಲ್ಲ. ಸಂಘರ್ಷದ ಬದುಕೇಹೆಚ್ಚಾಗಿದೆ. ’ವಿಚ್ಛೇದನ’, ’ಪ್ರತ್ಯೇಕವಾಸ’ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ವಿವಾಹ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ ಸಾಮಾಜಿಕ ಛಿದ್ರೀಕರಣಕ್ಕೆದಾರಿಯಾಗಿದೆ.

ವಿವಾಹವನ್ನು ಇಂದು ಆಧುನಿಕತೆ ಹಿಡಿದಿಟ್ಟು ಕೊಂಡಿದೆ. ಇದರ ಪರಿಣಾಮದಿಂದ ಆಚರಣೆ, ವಿಧಿ-ವಿಧಾನ, ಮೌಲ್ಯಗಳ ಕುಸಿತಆರಂಭವಾಗಿದೆ. ಕೇವಲ ಆಡಂಬರ ತೋರಿಕೆಗೆ ಮತ್ತು ಹಣ-ಅಂತಸ್ತಿನ, ಒಡವೆಗಳ ಪ್ರದರ್ಶನಕ್ಕೆ ವಿವಾಹದ ಆಚರಣೆ ಸೀಮಿತವಾಗಿದೆ. ಜನ ಮಳೆ, ಗಾಳಿ, ಮಂಜು ಯಾವುದನ್ನೂನೋಡದೇ ವರ್ಷಪೂರ್ತಿ ವಿವಾಹ ನೆರವೇರಿಸುತ್ತಿದ್ದಾರೆ. ದಾರ ಧರಿಸಿದವನೊಬ್ಬ ಇಂತಹ ದಿನ ಶ್ರೇಷ್ಠ ಎಂದುಬಿಟ್ಟರೆ, ಋತು, ನಕ್ಷತ್ರ ಯಾವುದನ್ನೂ ಚಿಂತಿಸದ ಸ್ಥಿತಿಯಲ್ಲಿದ್ದಾರೆ.

ಇಂದಿನ ಅರ್ಥಹೀನ ’ವಿವಾಹ’ ಆಚರಣೆಯ ಬಗ್ಗೆಜಾಗೃತಗೊಳ್ಳಬೇಕಿದೆ. ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಇಲ್ಲವಾದಲ್ಲಿ ವಿವಾಹದಿಂದ ಉಂಟಾಗುವ ದುಷ್ಪರಿಣಾಮನಮ್ಮ ಕೌಟುಂಬಿಕ ವ್ಯವಸ್ಥೆಯನ್ನು, ಸಾಮಾಜಿಕ ವ್ಯವಸ್ಥೆಯನ್ನುಬಿರುಕುಗೊಳಿಸುತ್ತದೆ. ಹೀಗಾಗಿ ನಾವುಗಳು ಮೌಲ್ಯಯುತವಿವಾಹ ಸಂಸ್ಕಾರವನ್ನು ಪುನರುಜ್ಜೀವನಗೊಳಿಸಬೇಕಿದೆ. ನಮಗೆ ನಾವೇ ಅತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಒಟ್ಟಾರೆ, ವಿವಾಹ ಎಂಬುದು ಒಂದು ಸಾಮಾಜಿಕ ಸಂಸ್ಥೆ. ಇದುಕುಟುಂಬ ಕುರಿತಂತೆ ಆಗಿರುತ್ತದೆ. ಹೊಣೆಗಾರಿಕೆಯಿಂದಕೂಡಿರುತ್ತದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಆಸ್ತಿ ಮತ್ತುವಂಶಾವಳಿಯ ಮುಂದುವರಿಕೆ ಆಗಿರುತ್ತದೆ. ’ವಿವಾಹ’ ಎಂಬುದು ಬೇರೆಯವರ ಕುರಿತು ಚಿಂತಿಸಲು ಪ್ರೇರೇಪಿಸುತ್ತದೆ. ಬಲವಂತಪಡಿಸುತ್ತದೆ. ಕಟ್ಟಿಕೊಂಡವರ ಕುರಿತು ಕರ್ತವ್ಯ ಪ್ರಜ್ಞೆಮೂಡಿಸುತ್ತದೆ. ಮಕ್ಕಳ ಬಗ್ಗೆ ಆಸ್ಥೆ ಮೂಡಿಸುತ್ತದೆ. ಚರಾಸ್ತಿ-ಸ್ಥಿರಾಸ್ಥಿಗಳ ಬಗ್ಗೆ ನಿಗಾ ವಹಿಸುವಂತೆ ಉದ್ದೀಪನಗೊಳಿಸುತ್ತದೆ. ಒಟ್ಟಾರೆ ಇದೊಂದು ಹೊರೆಯೇ ಆಗಿರುತ್ತದೆ.

ವಿವಾಹ ಆಗುವುದು, ಮಕ್ಕಳನ್ನು ಪಡೆಯುವುದು ಒಂಟಿತನಕ್ಕೆ ಮದ್ದಲ್ಲ.

                                                                                                              ಡಾ.ಎಂ.ಎಸ್.ಮಣಿ