ಮೂಡಿಗೆರೆ : ಜಾನಪದ ಸಂಸ್ಕೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವುದು ಯುವಜನತೆಯ ಕರ್ತವ್ಯವಾಗಿದೆ : ಮಾಜಿ ಸಚಿವೆ ಮೋಟಮ್ಮ.

360
firstsuddi

ಮೂಡಿಗೆರೆ : ಅಂದಿನ ಕಾಲದಲ್ಲಿನ ನೈಜ ಜಾನಪದ ಸಂಸ್ಕೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವುದು ಯುವಜನತೆಯ ಕರ್ತವ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟು ಜಾನಪದ ಸಂಸ್ಕೃತಿಯು ವಿನಾಶದ ಅಂಚಿನಲ್ಲಿದೆ. ಮತ್ತೊಮ್ಮೆ ಎಲ್ಲರೂ ಜಾನಪದ ಕಲೆಯನ್ನು ಕಟ್ಟುವ ಕಾಯಕ ಮಾಡಬೇಕಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ಹೇಳಿದರು.
ಮೂಡಿಗೆರೆ ಜಾನಪದ ಪರಿಷತ್ ವತಿಯಿಂದ ನಳಂದ ಆಂಗ್ಲ ಮಾದ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುಗ್ಗಿ ಕಾಲದಲ್ಲಿ ಜಾನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಎನ್ನುವುದು ಜನಸಾಮಾನ್ಯರ ನೋವು ನಲಿವುಗಳನ್ನು ವ್ಯಕ್ತಪಡಿಸುವ ಮಾದ್ಯಮವಾಗಿ ಮೂಡಿಬಂದ ಒಂದು ಸಂಸ್ಕೃತಿ. ಇದು ನಮ್ಮ ದೇಶದ ಸಂಸ್ಕೃತಿಯ ಜೊತೆಗೆ ಅನಾವರಣಗೊಂಡಿದ್ದರಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಬದಲಾವಣೆಯ ಹೊಡೆತಕ್ಕೆ ಸಿಕ್ಕು ಜಾನಪದ ಕಲೆಯು ಕಳೆಗುಂದುತ್ತಾ ವಿನಾಶದ ದಾರಿಯಲ್ಲಿ ನಿಂತಿದೆ. ಇದನ್ನು ಎತ್ತಿ ನಿಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಲೆಗಳಲ್ಲಿ ಇಂಥಹ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಮಕ್ಕಳಿಗೆ ಜಾನಪದ ಕಲೆಯ ಮಹತ್ವ ಅರಿವಾಗುತ್ತದೆ. ವಿದ್ಯಾರ್ಥಿಗಳು ಇಂಥಹ ಹಲವು ಉತ್ತಮ ಕಲೆಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ತಮ್ಮ ಜೀವನದ ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು. ಇದು ಮಾನಸಿಕವಾಗಿ ಎಲ್ಲರೊಡನೆ ಬೆರೆಯಲು ಕೂಡ ಸಹಕಾರಿ ಎಂದರು.
ನಂತರ ಮಾತನಾಡಿದ ಬಕ್ಕಿ ಮಂಜುನಾಥ್ ಅವರು, ಹಿಂದಿನ ನಾಲ್ಕು ವರ್ಷಗಳಿಂದ ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ ಇಂಥಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಯುವ ಪೀಳಿಗೆಗೆ ಜಾನಪದ ಕಲೆಯ ಮಹತ್ವ ಹಾಗೂ ಅದರ ಸವಿಯನ್ನು ತಿಳಿಸುವ ಸಲುವಾಗಿ ಕಾಯ್ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಾನಪದಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗೆ ಆಯೋಜಿಸುವುದರ ಮೂಲಕ ಆಸಕ್ತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು. 54 ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಈ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾದ್ಯಮಗಳ ಪ್ರಭಾವಕ್ಕೆ ಸಿಕ್ಕಿಕೊಂಡಿರುವ ಯುವಜನತೆ ಸಾಮಾಜಿಕ ಬದುಕುಗಳಲ್ಲಿ ಬಿರುಕು ಮೂಡಿಸಿಕೊಳ್ಳುತ್ತಿದ್ದಾರೆ. ಇದೊಂದು ನಿರಾಶದಾಯಕ ಬೆಳವಣಿಗೆ. ತಮ್ಮಷ್ಟಕ್ಕೆ ತಾವೇ ಕಳೆದುಹೋಗಿ ಜೀವನ ಹಾಳುಮಾಡಿಕೊಳ್ಳುತ್ತಿರುವ ಸಮಾಜಕ್ಕೆ ಜಾನಪದ ಕಲೆಯು ಬದುಕುವ ಛಲ ಹುಟ್ಟಿಸುವ ಸಾಮಥ್ರ್ಯ ಹೊಂದಿದೆ. ನೋವು ತಿನ್ನುತ್ತ ಬದುಕು ದೂಡುತ್ತಿದ್ದ ಅದೆಷ್ಟೋ ಜೀವಗಳಿಗೆ ಸಂಜೀವಿನಿ ಈ ಜಾನಪದ ಕಲೆಯನ್ನು ಎಲ್ಲರೂ ಮೈಗೂಡಿಸಿಕೊಂಡರೆ ಒಳಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎಸ್.ನಾಗರಾಜ್ ವಹಿಸಿದ್ದರು. ಸ್ವಾಗತವನ್ನು ದೈಹಿಕ ಶಿಕ್ಷಕ ಜಯಪಾಲ್ ಮಾಡಿದರು. ಮುಖ್ಯ ಅತಿಥಿಗಳಾಗಿ, ಕಾರ್ಯದರ್ಶಿ ಲಕ್ಷ್ಮಣ ಗೌಡ, ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಡಾ.ಸಂಪತ್ ಬೆಟ್ಟಗೆರೆ, ತಾಲ್ಲೂಕು ಕಸಾಪ ಕಾರ್ಯದರ್ಶಿ ಸುರೇಶ್, ಕಸಾಪ ಸದಸ್ಯ ಕೋಮರಾಜು, ನಳಂದ ಶಾಲೆಯ ಮುಖ್ಯ ಶಿಕ್ಷಕರಾದ ವಿವಿ ಕಣಗಿನಾಳ್, ಇರ್ಫಾನ, ಆಡಳಿತ ಮಂಡಳಿ ಸದಸ್ಯರುಗಳಾದ ಗಣೇಶ್, ಸುರೇಶ್, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ಮಕ್ಕಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.