ಮೂಡಿಗೆರೆ : ಬಿ ಹೊಸಹಳ್ಳಿ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ – ಹುಲಿ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ…

527
firstsuddi

ಮೂಡಿಗೆರೆ : ತಾಲ್ಲೂಕಿನ ಬಣಕಲ್ ಹೋಬಳಿ ಬಿ ಹೊಸಹಳ್ಳಿ ಗ್ರಾಮದ ಸುತ್ತಮುತ್ತ ಕೆಲ ದಿನಗಳಿಂದ ಹುಲಿಗಳು ಸಂಚರಿಸುತ್ತಿದ್ದು ಹುಲಿಯನ್ನು ಸ್ಥಳಾಂತರ ಮಾಡಬೇಕು ಎಂದು ಬಿ ಹೊಸಹಳ್ಳಿ ಸುತ್ತಮುತ್ತಲಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾರತಿಬೈಲ್ ಗ್ರಾಮಸ್ಥ ಶಿವಪ್ರಸಾದ್ ಮಾತನಾಡಿ ಬಿ.ಹೊಸಹಳ್ಳಿ ಗ್ರಾಮದ ಸುತ್ತಮುತ್ತ ಕೆಲ ದಿನಗಳಿಂದ ಕಾಡುಹುಲಿಗಳೆರಡು ಹೆಚ್ಚಾಗಿ ಓಡಾಡುತ್ತಿದ್ದು, ಸುತ್ತಲಿನ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ, ಕೆಲವೇ ದಿನಗಳ ಹಿಂದೆ ಚಕ್ಕಮಕ್ಕಿಯಿಂದ ಭಾರತಿಬೈಲ್ ನಡುವಿನ ರಸ್ತೆ ಮಧ್ಯೆ, ಸ್ಮಶಾನದ ಸುತ್ತಮುತ್ತ ಹುಲಿ ಓಡಾಡುವುನ್ನು ಕಂಡ ಗ್ರಾಮಸ್ಥರು ಆತಂಕದಿಂದ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರೂ ಕೂಡ ಅರಣ್ಯ ಇಲಾಖೆಯವರು ಇದುವರೆಗೂ ಹುಲಿಯನ್ನು ಸ್ಥಳಾಂತರಿಸಲು ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ, ಈ ಭಾಗದ ವಿಧ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಹುತೇಕ ಜನಸಾಮಾನ್ಯರು ನಡೆದಾಟದಿಂದಲೇ ದೈನಂದಿನ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದು, ಹುಲಿ ಕಾಣಿಸಿಕೊಂಡ ತರುವಾಯ ಪೋಷಕರು ಮಕ್ಕಳನ್ನು ಅಂಗನವಾಡಿ ಮತ್ತು ಶಾಲೆಗೆ ಬಿಡಲು ಭಯ ಪಡುವಂತಾಗಿದೆ. ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದು, ಸುತ್ತಲಿನ ಪರಿಸ್ಥಿತಿ ಆತಂಕದಿಂದ ಕೂಡಿದೆ ಎಂದರು.
ಅರಣ್ಯ ಇಲಾಖೆ ಹುಲಿಗಳಿಂದ ಯಾವುದೇ ತರಹದ ಅನಾಹುತ ಸಂಭವಿಸುವ ಮುನ್ನ ಸಾಧ್ಯವಾದಷ್ಟು ಬೇಗ ವೈಜ್ಞಾನಿಕ ರೀತಿಯಲ್ಲಿ ಹಿಡಿದು, ಸ್ಥಳಾಂತರಿಸಬೇಕು, ಇಲ್ಲವಾದರೆ ಮುಂದಿನ ದಿನದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಅರಣ್ಯ ಇಲಾಖೆ ಎದುರು ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.