ಮೂಡಿಗೆರೆ : ಹಳೇಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯರಾಂ, ಉಪಾಧ್ಯಕ್ಷರಾಗಿ ಭಾರತಿ ರವೀಂದ್ರ ಆಯ್ಕೆ…

383
firstsuddi

ಮೂಡಿಗೆರೆ : ಪಟ್ಟಣದ ಹಳೇ ಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯರಾಂ ಹಾಗೂ ಉಪಾಧ್ಯಕ್ಷರಾಗಿ ಭಾರತಿ ರವೀಂದ್ರ ಆಯ್ಕೆಯಾದರು.
ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಜಯರಾಂ ಹಾಗೂ ಭಾರತೀ ರವೀಂದ್ರ ಅವರನ್ನು ಹೊರತುಪಡಿಸಿ ಬೇರೆ ನಾಮಪತ್ರ ಸಲ್ಲಿಕೆಯಾಗದಿದ್ದ ಕಾರಣ ನಾಮಪತ್ರ ಸಲ್ಲಿದ್ದ ಇಬ್ಬರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣೆ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಯರಾಂ ಅವರು, ಮೂರು ದಶಕಗಳಿಂದ ಹಳೇ ಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿನ ಸಂಘವು ಪ್ರಾರಂಭವಾದಾಗಿನಿಂದಲೂ ರೈತರುಗಳಿಗೆ ಉಪಯುಕ್ತವಾದ ಚಟುವಟಿಕೆಗಳ ನಡೆಸುವುದರ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಂದು ಉತ್ತಮ ಲಾಭದಲ್ಲಿ ಸಂಘವು ನಡೆಯುತ್ತಿದೆ ಎಂದರೆ ರೈತರವಾದ ಯೋಜನೆಗಳಿಂದ ಮಾತ್ರವೇ ಹೊರತು ಯಾವುದೇ ಅಡ್ಡದಾರಿಗಳಿಂದ ಅಲ್ಲ. ನನ್ನ ಸೇವಾನಿವೃತ್ತಿಯ ನಂತರ ಚುನಾವಣೆಯ ಮೂಲಕ ಅಧ್ಯಕ್ಷ ಸ್ಥಾನ ಒಲಿದಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಹೊಸ ರೀತಿಯ ಯೋಜನೆಗಳನ್ನು ರೂಪಿಸುವುದರ ಮೂಲಕ ರೈತರ ಅಭಿವೃದ್ಧಿಯಲ್ಲಿ ಸಹಭಾಗಿಯಾಗುತ್ತೇನೆ ಎಂದರು.
ನಂತರ ಮಾತನಾಡಿದ ಉಪಾಧ್ಯಕ್ಷೆ ಭಾರತೀ ರವೀಂದ್ರ ಅವರು, ಪಟ್ಟಣದ ಹೃದಯಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು, ಪಟ್ಟಣಕ್ಕೆ ಹೊಂದಿಕೊಂಡಂತಿರುವ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ವರದಾನವಾಗಿದೆ. ರೈತರು ತಮ್ಮ ಇತರೆ ದಿನನಿತ್ಯದ ಕಾಯಕಗಳ ಜೊತೆಯಲ್ಲಿ ಸಂಘದಲ್ಲಿನ ಕೆಲಸಗಳನ್ನೂ ಜೊತೆಯಲ್ಲಿ ಮುಗಿಸಿಕೊಂಡು ಸಾಗಬಹುದು. ಎಲ್ಲರ ಏಳಿಗೆಯೇ ಸಹಕಾರ ಸಂಘದ ಮೂಲತತ್ವವಾಗಿದ್ದು, ಸಿಗುತ್ತಿರುವ ಸವಲತ್ತುಗಳನ್ನು ಎಲ್ಲಾ ರೈತರುಗಳು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಕಾಣಬೇಕು. ಆಧುನಿಕತೆ ಮುಂದುವರೆದಂತೆ ಬಹುತೇಕ ಸೇವೆಗಳು ಬೆರಳಂಚಿನಲ್ಲಿ ಸಿಗುತ್ತಿದ್ದು ಕಛೇರಿಗೆ ಬರುವ ಶ್ರಮವನ್ನು ಕಡಿಮೆ ಮಾಡಿದೆ. ಆದರೂ ರೈತರುಗಳು ಸಂಘದ ಕಛೇರಿಗೆ ಬಂದು ಎಲ್ಲರೊಡನೆ ಬೆರೆತು ಮಾರ್ಗದರ್ಶನ ನೀಡಬೇಕು ಎಂದರು.
ಅಭಿನಂದನಾ ಸಮಾರಂಭದಲ್ಲಿ ಸಂಘದ ಸದಸ್ಯರುಗಳು, ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.