ಚಿಕ್ಕಮಗಳೂರಿನ- ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ರು ಕೂಡ, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗರಿ, ಕುದುರೆಮುಖ, ಕೆರೆಕಟ್ಟೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾರೀ ಮಳೆ-ಗಾಳಿಗೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ತಿರುವಿನಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಅಲ್ಲಲ್ಲೇ ಸ್ಥಗಿತಗೊಂಡಿದ್ದು, ಗಿರಿಭಾಗದ ಗ್ರಾಮಗಳ ಜನ ಗ್ರಾಮಕ್ಕೆ ತೆರಳಲು ಮಾರ್ಗವಿಲ್ಲದೆ ಪರದಾಡ್ತಿದ್ದಾರೆ. ಕೈಮರ ಮೂಲಕ ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಮಾರ್ಗಕ್ಕೆ ತೆರಳೋ ಪ್ರವಾಸಿಗರು ಕೂಡ ಪರದಾಡ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರೋ ಗ್ರಾಮಾಂತರ ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಸ್ಥಳಿಯರು ಮರವನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡ್ತಿದ್ದಾರೆ. ಆದ್ರೆ, ಪ್ರವಾಸಿಗರು ಚಿಕ್ಕಮಗಳೂರಿನ ಗಿರಿ ಭಾಗಕ್ಕೆ ಪ್ರವಾಸಕ್ಕೆ ಬರೋ ಪ್ಲಾನ್ ಇದ್ರೆ ತಮ್ಮ ಟ್ರಿಪ್ಪನ್ ಸ್ವಲ್ಪ ದಿನ ಮುಂದೂಡೋದು ಒಳ್ಳೆಯದು. ಯಾಕಂದ್ರೆ, ಕಾಫಿನಾಡಿನ ಗಿರಿಭಾಗದಲ್ಲಿ ಮಳೆ ಮುಂದುವರೆದಿದ್ದು ಮಳೆಯಿಂದಾಗಿ ಗುಡ್ಡದ ಮಣ್ಣು ರಸ್ತೆಗೆ ಬೀಳುತ್ತಿದೆ. ಮಳೆಯಿಂದ ಎತ್ತರದ ಪ್ರದೇಶದಿಂದ ಸಣ್ಣ-ಸಣ್ಣ ಕಲ್ಲು ಮಿಶ್ರಿತ ಕೆಮ್ಮಣ್ಣು ರಸ್ತೆಗೆ ಬಿಳ್ತಿದೆ. ಈ ಮಣ್ಣಿನಿಂದ ಗಾಡಿಗಳು ಹೆಚ್ಚಾಗಿ ಸ್ಕಿಡ್ ಆಗ್ತಾವೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸೋರು ತುಂಬಾ ಎಚ್ಚರಿಂದ ಇರೋದು ಒಳ್ಳೆಯದು. ಬೆಟರ್ ಅಂದ್ರೆ, ಪ್ರವಾಸ ಬರೋ ಐಡಿಯಾ ಇದ್ರೆ ಸ್ವಲ್ಪ ಮುಂದೂಡೋದು ಒಳ್ಳೆಯದು. ಸಾಲದಕ್ಕೆ ಮಲೆನಾಡು ಭಾಗದಲ್ಲೂ ಭಾರೀ ಗಾಳಿಯೊಂದಿಗೆ ಸುರಿಯುತ್ತಿರೋ ಮಳೆಯಿಂದ ಮಲೆನಾಡಿನ ಅಲ್ಲಲ್ಲೇ ಭೂಮಿ ಕುಸಿಯುತ್ತಿದ್ದು, ವಿದ್ಯುತ್ ಕಂಬಗಳು ಕೂಡ ನೆಲಕ್ಕುರುತ್ತಿವೆ. ಮಲೆನಾಡಿನ ಜನ ಹದಿನೈದಿಪ್ಪತ್ತು ದಿನಗಳಿಂದ ಕತ್ತಲ್ಲಲಿ ಬದುಕುವಂತಾಗಿದೆ. ಮಳೆ ನಿಲ್ತು ಅಂತ ಖುಷಿ ಪಡುವಷ್ಟರಲ್ಲಿ ಮಲೆನಾಡಿನ ಗಾಳಿ ಮತ್ತೆ ಸ್ಥಳಿಯರಿಗೆ ಆತಂಕ ತಂದೊಡ್ಡಿದೆ.