ಕಳಸ:ಗ್ರಾಮಗಳ ಅಭಿವೃದ್ಧಿಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ;ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರ ಆಕ್ರೋಶ…

403
firstsuddi

ಕಳಸ:ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುದುರೆಮುಖ ಮತ್ತು ಸುತ್ತಮುತ್ತಲ ಗ್ರಾಮಗಳು ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರದಿಂದ ವಂಚಿತವಾಗಿರುವ ಕಾರಣ ಮುಂಬರುವ ಲೋಕಸಭೆ ಚುನಾವಣೆ ಮತದಾನವನ್ನು ಬಹಿಷ್ಕರಿಸುವುದಾಗಿ ಕುದುರೆಮುಖ ಮೂಲನಿವಾಸಿಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರ ಹಿತರಕ್ಷಣಾ ವೇದಿಕೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಕುದುರೆಮುಖ ಈಗಾಗಲೇ ಪ್ರಸ್ತಾವನೆಗೊಳಪಟ್ಟ 1657.36 ಎಕರೆ ಕಂದಾಯ ಭೂಮಿಯನ್ನು ಅರಣ್ಯಕ್ಕೆ ಹಸ್ತಾಂತರಿಸುವುದನ್ನು ಕೈ ಬಿಡಬೇಕು. ಕಳಸವನ್ನು ತಾಲ್ಲೂಕಾಗಿ ಘೋಷನೆಯಾಗಿರುವುದರಿಂದ ಕುದುರೆಮುಖದ ಖಾಲಿ ಬಿದ್ದ ಕಟ್ಟಡವನ್ನು ತಾತ್ಕಾಲಿಕವಾಗಿ ಉಪಯೋಗಿಸಿಕೊಳ್ಳಬೇಕು. ಪಾರಂಪರಿಕ ಅರಣ್ಯವಾಸಿಗಳಿಗೆ 2005 ಡಿಸೆಂಬರ್ 13ಕ್ಕಿಂತ ಮೊದಲು ವಾಸವಿದ್ದವರಿಗೆ ಅರಣ್ಯ ಹಕ್ಕು ಪತ್ರ ನೀಡಬೇಕು. ಭೂಮಿಯನ್ನು ನಂಬಿ ಬದುಕುವ ಬಗರ್ ಹುಕ್ಕಂದಾರರಿಗೆ ಅರಣ್ಯ ಇಲಾಖೆಯು ತೆರವು ನೋಟಿಸನ್ನು ನೀಡುವುದು ಮತ್ತು ತೆರವಿಗೆ ಮುಂದಾಗುವುದನ್ನು ನಿಲ್ಲಿಸಬೇಕು. ಅರಣ್ಯ ಇಲಾಖೆಯು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕೆಲಸಗಳಿಗೆ ಅಡಚಣೆ ಉಂಟು ಮಾಡುವುದನ್ನು ನಿಲ್ಲಿಸಬೇಕು. 94ಸಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮನೆ ಹಕ್ಕು ಪತ್ರ ನೀಡಲು ಕೆಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆಯು ಒಪ್ಪಿಗೆ ಪಡೆಯಬೇಕೆಂದಿರುವುದು, ಹಕ್ಕು ಪತ್ರ ಪಡೆಯಲು ಅಡಚಣೆಯಾಗಿದ್ದು ಈ ಸಮಸ್ಯೆಯನ್ನು ನಿವಾರಿಸಲು ಹಕ್ಕು ಪತ್ರವನ್ನು ನೀಡುವಂತಾಗಬೇಕು. ಈ ಪ್ರದೇಶದಲ್ಲಿ ಹೆಚ್ಚು ಗಿರಿಜನ ಕುಟುಂಬಗಳು ವಾಸವಾಗಿದ್ದು ಮಳೆಗಾಲದಲ್ಲಿ ಭಾರಿ ಮಳೆ ಸುರಿಯುವುದರಿಂದ ಮಳೆಗಾಲದಲ್ಲಿ ಮಣ್ಣಿನ ರಸ್ತೆಗಳು ಹದಗೆಡುತ್ತಿರುವುದರಿಂದ ಕಾಂಕ್ರೀಟಿಕರಣ ಅಥವಾ ಡಾಂಬರೀಕರಣ ಮಾಡುವ ಮೂಲಕ ಸರ್ವಋತು ರಸ್ತೆಗಳನ್ನಾಗಿ ಮಾರ್ಪಡಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಈ ಹಿಂದೆ ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ನಮ್ಮ ಅವಹಾಲುಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಕೂಡ ನಮಗೆ ಈ ವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ತೀರ್ಮಾನವನ್ನು ವಿಷಾದದಿಂದ ಕೈಕೊಂಡಿರುತ್ತೇವೆ. ಎಂದು ಕುದುರೆಮುಖ ಮೂಲನಿವಾಸಿಗಳ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಹೆಚ್.ಎಸ್.ಶ್ರೀಪಾಲಯ್ಯ, ಅಧ್ಯಕ್ಷ ಹೆಚ್.ಆರ್.ನಾಗೇಶ್ ಗೌಡ, ಉಪಾಧ್ಯಕ್ಷ ಜಯಂತ್ ಗೌಡ, ಕಾರ್ಯದರ್ಶಿ ಸುರೇಶ್ ಭಟ್, ಸಹಕಾರ್ಯದರ್ಶಿ ಶಂಕರೇಗೌಡ ತಿಳಿಸಿದ್ದಾರೆ.