ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಐಟಿ ದಾಳಿಗಳಾಗಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿದವರ ಮೇಲೆ, ಭ್ರಷ್ಟಾಚಾರಿಗಳ ಮೇಲೆ ಐಟಿ ದಾಳಿ ನಡೆಸಲಿ. ಅದನ್ನು ಬಿಟ್ಟು ಚುನಾವಣಾ ಸಮಯದಲ್ಲಿ ವಿರೋಧ ಪಕ್ಷಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದರುವುದು ಮಾತ್ರ ಖಂಡನೀಯ.
ಶಾಸಕರ ಖರೀದಿಗೆ 25-30 ಕೋಟಿ ರೂ. ಹಣ ಕೊಡಲು ತಯಾರಿದ್ದ ಯಡಿಯೂರಪ್ಪ, ಮನೆಯಲ್ಲಿ ಹಣ ಎಣಿಸುವ ಯಂತ್ರ ಇಟ್ಟಿದ್ದ ಈಶ್ವರಪ್ಪ ಇವರೆಲ್ಲ ಪ್ರಾಮಾಣಿಕರೇ? ಇವರೆಲ್ಲರ ಮೇಲೆ ಯಾಕೆ ಐಟಿ ಇಲಾಖೆ ದಾಳಿ ಮಾಡುತ್ತಿಲ್ಲ? ಐಟಿ ಇಲಾಖೆ ಬಳಕೆಯಾಗುತ್ತಿರುವುದು ಭ್ರಷ್ಟರ ನಿಗ್ರಹಕ್ಕೋ ಅಥವಾ ಬಿಜೆಪಿಯವರ ರಾಜಕೀಯ ಎದುರಾಳಿಗಳ ನಿಗ್ರಹಕ್ಕೋ?
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾದಾಮಿಯಲ್ಲಿ ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಿ.ಎಂ ಇಬ್ರಾಹಿಂ, ಚನ್ನಾರೆಡ್ಡಿ, ಆರ್.ಬಿ ತಿಮ್ಮಾಪುರ್ ಹಾಗೂ ಎಸ್.ಆರ್ ಪಾಟೀಲ್ ಅವರ ರೂಂಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಹಾಗಾದರೆ ಬಾದಾಮಿಯಲ್ಲಿ ಶ್ರೀರಾಮುಲು ಪರವಾಗಿ ಕೆಲಸ ಮಾಡುತ್ತಿದ್ದವರು ಐಟಿ ಇಲಾಖೆಯ ಕಣ್ಣಿಗೆ ಕಾಣಲಿಲ್ಲವೇ? ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.










