ಬೆಂಗಳೂರು : ತಮಿಳಿನ ವಿಜಯ್ ಅಭಿನಯದ ಮೆರ್ಸಲ್ ಸಿನಿಮಾದಲ್ಲಿ ಜಿಎಸ್‌ಟಿ, ಡಿಜಿಟಲ್ ಇಂಡಿಯಾ ಯೋಜನೆಗಳ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಬಿಜೆಪಿಯವ್ರು ಆರೋಪಿಸಿದ್ದರು. ಸಿನಿಮಾದಲ್ಲಿರೋ ಸನ್ನಿವೇಶಗಳ ಕೆಲ ತುಣುಕುಗಳನ್ನ ತೆಗೆದುಹಾಕುವಂತೆ ತಮಿಳುನಾಡು ಬಿಜೆಪಿ ಘಟಕ ಆಗ್ರಹಿಸಿತ್ತು. ಈ ಸಂಬಂಧ ಚಿತ್ರತಂಡ ಹಾಗೂ ಬಿಜೆಪಿಯ ನಡುವೆ ತಿಕ್ಕಾಟ ಏರ್ಪಟ್ಟಿರುವಾಗಲೇ ತಮಿಳು ಚಿತ್ರರಂಗ ಮೆರ್ಸಲ್ ಪರ ಬೆಂಬಲಕ್ಕೆ ನಿಂತಿದ್ದಾರೆ. ಕಬಾಲಿ ಚಿತ್ರದ ನಿರ್ದೇಶಕ ಪಾ ರಂಜಿತ್, ಪಿ.ಸಿ ಶ್ರೀರಾಮ್ , ಶ್ರೀ ವಿದ್ಯಾ ಸೇರಿದಂತೆ ರಾಜಕೀಯದ ಹೊಸ್ತಿಲಲ್ಲಿರುವ ನಟ ಕಮಲ್ ಹಾಸನ್ ಮರ್ಸೆಲ್ ಪರ ನಿಂತಿದ್ದಾರೆ.
ಈ ವಿವಾದದ ಸಂಬಂಧ ಟ್ವಿಟ್ ಮಾಡಿರೋ ನಟ ಕಮಲ್ ಹಾಸನ್, ಈಗಾಗಲೇ ಚಿತ್ರದ ಸೆನ್ಸಾರ್ ಮಾಡಲಾಗಿದೆ. ಎರಡನೇ ಬಾರಿ ಸೆನ್ಸಾರ್ ಮಾಡುವ ಅಗತ್ಯವಿಲ್ಲ. ಜಿಎಸ್‌ಟಿ ಬಗ್ಗೆ ವಿಮರ್ಶೆ ಮಾಡುತ್ತಿರುವವರ ಬಾಯಿ ಮುಚ್ಚಿಸೋ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಜೊತೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೆರ್ಸಲ್ ಪರ ಮಾತನಾಡಿದ್ದಾರೆ. ತಮಿಳು ಸಿನಿಮಾಗಳು ಭಾಷೆ, ಸಂಸ್ಕ್ರತಿಯನ್ನ ಬಿಂಬಿಸುತ್ತಿವೆ. ಅವುಗಳನ್ನ ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ರಾಹುಲ್ ಪ್ರಧಾನಿ ಮೋದಿಗೆ ಆಗ್ರಹಿಸಿದ್ದಾರೆ.