ಹಾಸನ : ಐತಿಹಾಸಿಕ ಹಾಸನಾಂಬೆ ಉತ್ಸವಕ್ಕೆ ನಿನ್ನೆ ವಿದ್ಯುಕ್ತ ತೆರೆ ಬಿದ್ದಿದೆ. ದೇವಸ್ಥಾನದ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಹುಂಡಿಯಲ್ಲಿ ಎಟಿಎಂ ಕಾರ್ಡ್, ಫಾರಿನ್ ಕರೆನ್ಸಿ, ಆಭರಣ, ನಿಷೇಧಿತ ಹಳೆಯ 500 ರೂ ಮುಖಬೆಲೆಯ ನೋಟುಗಳು ಕೂಡ ಸಿಕ್ಕಿವೆ. ವಿಚಿತ್ರ ಎಂದರೆ ಹಲವು ಪತ್ರಗಳು ಕೂಡ ಸಿಕ್ಕಿರುವುದು. ಒಂದೊಂದು ಪತ್ರಗಳು ಕೂಡ ವಿಭಿನ್ನವಾಗಿವೆ. ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು ಎಂದು ಯುವಕನೊಬ್ಬ ಪ್ರೇಮ ಪತ್ರಹಾಕಿದ್ದಾನೆ.
ಕುಟುಂಬದ ಸಮಸ್ಯೆ ನಿವಾರಿಸು ತಾಯಿ ಎಂದು ಮಹಿಳೆಯೊಬ್ಬಳು ಪತ್ರದ ಮೂಲಕ ಹಾಸನಾಂಬೆಯನ್ನು ಬೇಡಿಕೊಂಡಿದ್ದಾಳೆ. ಮಗನ ಆರೋಗ್ಯ ಸಮಸ್ಯೆ ಬಗೆಹರಿಸು ದೇವಿ ಎಂದು ತಾಯಿಯೊಬ್ಬಳು ಕೋರಿಕೊಂಡಿದ್ದಾಳೆ. ಹೀಗೆ ಹತ್ತಾರು ಪತ್ರಗಳು ಲಭ್ಯವಾಗಿದ್ದು, ಪತ್ರ ಮುಖೇನ ಭಕ್ತರು ದೇವಿ ಬಳಿ ಬೇಡಿಕೊಂಡಿದ್ದಾರೆ. ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು 50 ಮಂದಿ ನಿಯೋಜನೆ ಮಾಡಲಾಗಿತ್ತು. ಎಣಿಕೆ ಸ್ಥಳದಲ್ಲಿ 4 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿರುವುದರಿಂದ ಹಣ ಎಣಿಕೆ ಕಾರ್ಯ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಿತು.
ಕಳೆದ ವರ್ಷ 2.36 ಕೋಟಿ ಆದಾಯ ಕಾಣಿಕೆ ರೂಪದಲ್ಲಿ ಬಂದಿದ್ದು ದಾಖಲೆಯಾಗಿತ್ತು. ಆದ್ರೆ ಈ ಬಾರಿ 4 ಕೋಟಿ ರೂಪಾಯಿ ಆಸುಪಾಸು ಆದಾಯ ಬಂದಿದೆ ಎನ್ನಲಾಗಿದೆ. ಹಾಸನಾಂಬೆಯ ಶೀಘ್ರ ದರ್ಶನಕ್ಕೆ 1 ಸಾವಿರ ರೂ ಟಿಕೆಟ್ ನಿಗದಿ ಮಾಡಿದ್ದು ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಹಾಸನಾಂಬೆಯ ದರ್ಶನಕ್ಕೆ ಅಹೋರಾತ್ರಿ ಅವಕಾಶ ನೀಡಲಾಗಿತ್ತು. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಈ ದೇವಾಲಯದಲ್ಲಿ ಈ ಬಾರಿ 10 ದಿನಗಳ ಹಾಸನಾಂಬೆಯ ದರ್ಶನದ ಅವಕಾಶವಿತ್ತು. 6-7 ಲಕ್ಷ ಭಕ್ತರು ದೇವಿಯ ದರ್ಶನ ಮಾಡಿದರೆನ್ನಲಾಗಿದೆ.