ಮೂಡಿಗೆರೆ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಪರ ಪ್ರಚಾರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆಯ ಪ್ರವಾಸಿ ಮಂದಿರ ಸಮೀಪ ಇಬ್ಬರು ಯುವಕರು ಮೋದಿ ಮೋದಿ ಎಂದು ಕೂಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ನಿಮಗೊಂದು ಉದ್ಯೋಗ ಕೊಡಿಸಲಿಲ್ಲ ನಿಮ್ಮ ಮೋದಿಯವರು. 2ಕೋಟಿ ಉದ್ಯೋಗ ಸೃಷ್ಟಿಸಿ ಕೊಡುತ್ತೇವೆ ಎಂದು ಅಂದು ಭಾಷಣ ಮಾಡಿದ್ದರು. ಅದು ಯುವಕರನ್ನು ಎಲ್ಲಿ ತಂದು ನಿಲ್ಲಿಸಿದೆ. ಯುವಕರಿಗಾಗಿ ಏನಾದರೂ ಮಾಡಿದ್ದಾರ? ಉತ್ತರ ಪ್ರದೇಶದಲ್ಲಿ ಮೋದಿ ಮೋದಿ ಎಂದು ಕೂಗುವುದಕ್ಕೆ ಜನ ಕರೆದುಕೊಂಡು ಬಂದು ಕೂಗಿಸಿದ್ದರು ಆದರೆ ದುರಂತ ಎಂದರೆ ಕರ್ನಾಟಕದಲ್ಲೂ ಅದೇ ಬಾವನೆ ಇಟ್ಟುಕೊಂಡಿರುವುದು. ಕರ್ನಾಟಕದ ಜನರಿಗೆ ಅತ್ಯಂತ ದ್ರೋಹ ಮಾಡಿರುವ ಪಕ್ಷ ಎಂದರೆ ಬಿಜೆಪಿ ಎಂದಿದ್ದಾರೆ.
ಈ ದೇಶ ರಕ್ಷಣೆ ಆಗಬೇಕು ಅಂದರೆ ನರೇಂದ್ರ ಮೋದಿ ಬಿಟ್ಟರೆ ಬೇರೆ ಯಾರಾ ಕೈಯಲ್ಲೂ ಆಗಲ್ಲ ಎಂದು ಭಾಷಣ ಮಾಡುತ್ತಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಇಲ್ಲಿಯವರೆಗೆ ಹಲವಾರು ಜನ ಪ್ರಧಾನ ಮಂತ್ರಿಗಳು ಈ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ಕಾಲದಲ್ಲಿ ದೇಶದ ಅಭದ್ರತೆಯನ್ನು ಕಂಡಿದ್ದೀರಾ? ದೇಶದ ಭದ್ರತೆಯನ್ನು ಕಾಪಾಡುತ್ತಿರುವುದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಮಾತ್ರವೇ? ಇಂದಿರಾಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರಿ ಕಾಲದಲ್ಲಿ ದೇಶವನ್ನು ಕಾಯಲಿಲ್ಲವೇ? “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯನ್ನು ಮಾಡಿದವರು ಲಾಲ್ಬಹದ್ದೂರ್ ಶಾಸ್ತ್ರಿಯವರು, ನರೇಂದ್ರ ಮೋದಿ ಅಲ್ಲ. ಅವರು ಅಧಿಕಾರವನ್ನು ಹಿಡಿದಿಟ್ಟುಕೊಳ್ಳವುದಕ್ಕಾಗಿ ದೇಶದಲ್ಲಿ ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡುತ್ತಿರುವುದು ನರೇಂದ್ರ ಮೋದಿಯವರ ಕೊಡುಗೆ ಎಂದಿದ್ದಾರೆ










