ಮೈಸೂರು : ಕೌಟುಂಭಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮಮತಾ(23) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆ. ಮೃತ ಮಮತಾ ನಾಗೇಶ್ ಅವರ ಎರಡನೇ ಪತ್ನಿಯಾಗಿದ್ದು, ಈ ದಂಪತಿಗೆ 8 ವರ್ಷದ ಮಗ ಕೂಡಾ ಇದ್ದಾನೆ. ಆರೋಪಿ ನಾಗೇಶ್ ಅವರ ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ನಾಗೇಶ್ ಅವರು ಮಮತಾ ಅವರನ್ನು ಎರಡನೇ ವಿವಾಹ ಮಾಡಿಕೊಂಡಿದ್ದು, ಆಗಾಗ ಇಬ್ಬರ ನಡುವೆ ಕೌಟುಂಭಿಕ ಕಲಹಗಳು ನಡೆಯುತ್ತಿದ್ದವು. ಎಂದಿನಂತೆ ನಿನ್ನೆಯೂ ಕೂಡಾ ಇಬ್ಬರ ನಡುವೆ ಜಗಳವಾಗಿದ್ದು, ಜಗಳವನ್ನು ಬಿಡಿಸಲು ಮಮತಾ ಅವರ ತಂದೆ ಮಧ್ಯೆ ಪ್ರವೇಶಿಸಿದ್ದರು. ಇದರಿಂದ ಕೋಪಗೊಂಡ ನಾಗೇಶ್ ಅವರು ತಮ್ಮ ಮಾವ ಹಾಗೂ ಮಗನ ಮುಂದೆಯೇ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಬಳಿಕ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡ ಇಲವಾಲ ಪೊಲೀಸರು ಆರೋಪಿ ನಾಗೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










