‘ನಮೋ’ ಎಂದರೆ ನಮಗೆ ಮೋಸ : ಹೀಗೆ ವ್ಯಾಖ್ಯಾನಿಸಿದ್ದು ಯಾರು ಗೊತ್ತಾ ?

510

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಸೀದಾ ರುಪಯ್ಯಾ ಎಂದು ವ್ಯಾಖ್ಯಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರ್ಜರಿ ತಿರುಗೇಟು ನೀಡಿರುವ ಕಾಂಗ್ರೆಸ್, ನಮೋ (ನರೇಂದ್ರ ಮೋದಿ) ಎಂಬುದನ್ನು ‘ನಮಗೆ ಮೋಸ’ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡುತ್ತ ಬಂದಿದೆ ಎಂದು ಆರೋಪಿಸಿದೆ. ದೇಶದ ಬ್ಯಾಂಕ್‌ಗಳ ಹಣವನ್ನು ಲಪಟಾಯಿಸಿಕೊಂಡು ಹೋಗಲು ವಂಚಕ  ಉದ್ಯಮಿಗಳಿಗೆ ಮೋದಿ ಅವಕಾಶ ಕೊಟ್ಟಿದ್ದಾರೆ. ಇಂತಹ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬಂದು ಅಷ್ಟು ದುಡ್ಡು ಕೊಟ್ಟಿದ್ದೇವೆ, ಇಷ್ಟು ದುಡ್ಡು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾರೆ.

ಏಕೆಂದರೆ, ಕೇಂದ್ರದಿಂದ ಅವರು ಹೇಳುತ್ತಿರುವಷ್ಟು ಹಣ ರಾಜ್ಯಕ್ಕೆ ಇನ್ನೂ ಬಂದೇ ಇಲ್ಲ. ಹೀಗಿದ್ದರೂ ಸುಳ್ಳು ಹೇಳುವ ಮೂಲಕ ನಮೋ (ನಮಗೆ ಮೋಸ) ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್  ಆರೋಪಿಸಿದರು. ನೀರವ್  ಮೋದಿ ಸೇರಿದಂತೆ ಹಲವು ವಂಚಕ ಉದ್ಯಮಿಗಳಿಗೆ ಬ್ಯಾಂಕ್ ಹಣವನ್ನು ಲೂಟಿ ಮಾಡಿಕೊಂಡು ದೇಶ ಬಿಟ್ಟು ಹೋಗಲು ಅವಕಾಶ ನೀಡಿದ ಮೋದಿ ಅವರು, ಇದೀಗ ಎಫ್‌ಆರ್‌ಡಿಐ ವಿಧೇಯಕ ತರಲು ಮುಂದಾಗಿದ್ದಾರೆ. ಬ್ಯಾಂಕ್‌ಗೆ ಅಭದ್ರತೆ ಉಂಟಾದಾಗ ಆ ಬ್ಯಾಂಕನ್ನು ಹೇಗೆ ರಕ್ಷಿಸಬೇಕು ಎಂಬುದು ಈ ವಿಧೇಯಕದ ಉದ್ದೇಶ. ಆದರೆ, ಈ ವಿಧೇಯಕದ ಹಿಂದೆ ದುರುದ್ದೇಶವೂ ಇದೆ. ಅದು ಬ್ಯಾಂಕ್‌ಗಳಿಗೆ ನಷ್ಟ ಉಂಟುಮಾಡಿದವರಿಂದ ಹಣ  ವಸೂಲಿ ಮಾಡುವುದರ ಬದಲು ಅನ್ಯ ಮಾರ್ಗಗಳಿಂದ ಬ್ಯಾಂಕ್ ರಕ್ಷಿಸುವ ವಿಧಾನವನ್ನು ಹೇಳುತ್ತದೆ.

ಇದರರ್ಥ ಬ್ಯಾಂಕ್‌ಗಳಿಗೆ ವಂಚನೆ ಮಾಡಿ ಪರಾರಿಯಾಗುವವರಿಗೆ  ಏನೂ ಆಗುವುದಿಲ್ಲ. ಅಂಥವರಿಗೆ ಸಾಲ ನೀಡಿ ನಷ್ಟ ಮಾಡಿಕೊಂಡರೂ ಆ ಬ್ಯಾಂಕನ್ನು ಸರ್ಕಾರ ರಕ್ಷಿಸುತ್ತದೆ. ಇದರಿಂದಾಗಿ ಹೊಸ ಮೋಸದ ಜಾಲಕ್ಕೆ ಅವಕಾಶ ದೊರೆಯಲಿದ್ದು, ಬ್ಯಾಂಕ್‌ಗಳಿಗೆ ಹಿಂತಿರುಗಿ ಬಾರದ ಹಣ ಅರ್ಥಾತ್ ಎನ್‌ಪಿಎ ಲಕ್ಷಾಂತರ ಕೋಟಿ ರು.ಗಳಾಗುತ್ತದೆ. ದೇಶದ ಅರ್ಥ ವ್ಯವಸ್ಥೆಯೇ ಗಂಡಾಂತರಕ್ಕೆ ಸಿಲುಕಲಿದೆ ಎಂದು ಹೇಳಿದರು.